A village in a desert in Kannada Horror Stories by Sandeep Joshi books and stories PDF | ಮರುಭೂಮಿಯೊಂದರ ಗ್ರಾಮ

Featured Books
Categories
Share

ಮರುಭೂಮಿಯೊಂದರ ಗ್ರಾಮ

ರಾಜಸ್ಥಾನದ ಜೈಸಲ್ಮೇರ್‌ನಿಂದ ಸುಮಾರು ನೂರು ಮೈಲಿ ದೂರದಲ್ಲಿರುವ 'ಸವರ್ಣಗಡ' ಗ್ರಾಮದ ಬಗ್ಗೆ ಹಳ್ಳಿಗರು ಆಡುವ ಮಾತುಗಳು ವಿಚಿತ್ರವಾಗಿದ್ದವು. "ಅಲ್ಲಿ ಮರಳು ಮಾತನಾಡುತ್ತದೆ, ಗಾಳಿ ಹಾಡುತ್ತದೆ, ಮತ್ತು ನೆರಳುಗಳು ಮನುಷ್ಯನನ್ನು ಬಿಟ್ಟು ನಡೆಯುತ್ತವೆ ಎಂಬುದು ಅಲ್ಲಿನ ನಾಣ್ಣುಡಿ. ವಿಕ್ರಮ್ ಒಬ್ಬ ಫೋಟೋ ಜರ್ನಲಿಸ್ಟ್. ಅಸಾಧ್ಯವಾದುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಅವನ ಹವ್ಯಾಸ. ತನ್ನ ಹಳೆಯ ಮಹೀಂದ್ರಾ ಜೀಪ್ ಹತ್ತಿ, ಜಿಪಿಎಸ್ ಕೂಡ ಕೆಲಸ ಮಾಡದ ಆ ಒಣ ಭೂಮಿಯತ್ತ ಅವನು ಹೊರಟಾಗ, ಆಗ ಅವನಿಗೆ ತಾನು ಎಂತಹ ಸುಳಿಗೆ ಸಿಲುಕಲಿದ್ದೇನೆ ಎಂದು ತಿಳಿದಿರಲಿಲ್ಲ.
ಸೂರ್ಯ ಮುಳುಗಲು ಇನ್ನೇನು ಎರಡು ಗಂಟೆಗಳಿದ್ದವು. ಮರಳು ದಿಬ್ಬಗಳು ಬಂಗಾರದ ಗುಡ್ಡಗಳಂತೆ ಕಾಣುತ್ತಿದ್ದವು. ದೂರದಲ್ಲಿ ಹಳೆಯ ಕೋಟೆಯ ಗೋಡೆಗಳಂತೆ ಕಾಣುವ ಸವರ್ಣಗಡದ ದೃಶ್ಯ ಗೋಚರವಾಯಿತು. ಗ್ರಾಮದ ಪ್ರವೇಶ ದ್ವಾರದ ಬಳಿ ಹಳೆಯದಾದ ಒಂದು ಬೋರ್ಡ್ ಇತ್ತು, ಅದರ ಮೇಲಿದ್ದ ಅಕ್ಷರಗಳು ಅಳಿಸಿ ಹೋಗಿದ್ದವು. ಆದರೆ ಅಲ್ಲಿ ಒಂದು ತಲೆಬುರುಡೆಯ ಚಿತ್ರ ಮಾತ್ರ ಸ್ಪಷ್ಟವಾಗಿತ್ತು.
ಗ್ರಾಮದ ಒಳಗೆ ಕಾಲಿಟ್ಟ ಕೂಡಲೇ ವಿಕ್ರಮ್‌ಗೆ ಏನೋ ಅಸಹಜವೆಂದು ಅನ್ನಿಸಿತು. ಬೀದಿಗಳಲ್ಲಿ ಮಕ್ಕಳು ಆಡುತ್ತಿರಲಿಲ್ಲ, ಹಟ್ಟಿಗಳಲ್ಲಿ ಜಾನುವಾರುಗಳಿರಲಿಲ್ಲ. ಮನೆಗಳೆಲ್ಲವೂ ಕೆಂಪು ಕಲ್ಲಿನಿಂದ ಕಟ್ಟಲ್ಪಟ್ಟಿದ್ದವು, ಆದರೆ ಪ್ರತಿ ಮನೆಯ ಬಾಗಿಲಿಗೂ ರಕ್ತದ ಬಣ್ಣದಂತಹ ಕೆಂಪು ತಿಲಕವನ್ನು ಹಚ್ಚಲಾಗಿತ್ತು. ಗ್ರಾಮದ ಮಧ್ಯಭಾಗದಲ್ಲಿದ್ದ ಬಾವಿಯ ಬಳಿ ವಿಕ್ರಮ್ ಹೋದನು. ಅಲ್ಲಿ ಕುಳಿತಿದ್ದ ಆ ಮುದಿ ಮನುಷ್ಯನ ಹೆಸರು ರಹೀಮ್ ಚಾಚಾ ಅವನ ಕಣ್ಣುಗಳಲ್ಲಿ ದೃಷ್ಟಿ ಇರಲಿಲ್ಲ, ಆದರೆ ವಿಕ್ರಮ್ ಹತ್ತಿರ ಬರುತ್ತಿದ್ದಂತೆಯೇ ಅವನು ಮಾತಾಡಲು ಶುರುಮಾಡಿದ. ಹೊಸಬನೇ, ಇಲ್ಲಿಗೆ ಬರುವುದು ಸುಲಭ, ಆದರೆ ಇಲ್ಲಿಂದ ಹೊರಹೋಗುವುದು ನಿನ್ನ ನೆರಳಿನ ಇಷ್ಟದ ಮೇಲೆ ನಿರ್ಧಾರವಾಗುತ್ತದೆ. ವಿಕ್ರಮ್ ನಕ್ಕನು. ಚಾಚಾ, ನಾನು ವಿಜ್ಞಾನ ನಂಬುವವನು. ನೆರಳು ಕೇವಲ ಬೆಳಕಿನ ಅನುಪಸ್ಥಿತಿ ಅಷ್ಟೇ. ರಹೀಮ್ ಚಾಚಾ ಬಿಳಿ ಕಣ್ಣುಗಳನ್ನು ಆಕಾಶದತ್ತ ತಿರುಗಿಸಿ ಹೇಳಿದನು, ಇಂದು ಹದಿನಾಲ್ಕನೆಯ ರಾತ್ರಿ, ಇಂದು ಮರುಭೂಮಿಯ ದೆವ್ವಗಳು ಹಸಿದಿರುತ್ತವೆ. ಬೆಳಕಿನ ಬಗ್ಗೆ ಎಚ್ಚರವಿರಲಿ.
ವಿಕ್ರಮ್ ಅಲ್ಲಿನ ಹಳೆಯ ಧರ್ಮಶಾಲೆಯಲ್ಲಿ ಉಳಿಯಲು ನಿರ್ಧರಿಸಿದನು. ರಾತ್ರಿ ಎಂಟು ಗಂಟೆಯಾಗುತ್ತಿದ್ದಂತೆ ಗ್ರಾಮದಲ್ಲಿ ಸಂಪೂರ್ಣ ಮೌನ ಆವರಿಸಿತು. ಹಕ್ಕಿಗಳ ಚಿಲಿಪಿಲಿ ಇಲ್ಲ, ನಾಯಿಗಳ ಬೊಗಳುವಿಕೆ ಇಲ್ಲ. ಕೇವಲ ಮರಳಿನ ಮೇಲೆ ಗಾಳಿ ಬೀಸುವ ಸಯ್ ಸಯ್ ಸದ್ದು ಮಾತ್ರ ಕೇಳಿಸುತ್ತಿತ್ತು. ವಿಕ್ರಮ್ ತನ್ನ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳನ್ನು ಪರಿಶೀಲಿಸುತ್ತಿದ್ದಾಗ ಅವನಿಗೆ ಆಘಾತ ಕಾದಿತ್ತು. ಹಗಲಿನಲ್ಲಿ ಅವನು ತೆಗೆದ ಹಳ್ಳಿಯ ಜನರ ಫೋಟೋಗಳಲ್ಲಿ, ಜನರ ದೇಹಗಳು ಸ್ಪಷ್ಟವಾಗಿದ್ದವು ಆದರೆ ಯಾರಿಗೂ ನೆರಳು ಇರಲಿಲ್ಲ. ಅವನು ತನ್ನ ಸ್ವಂತ ಫೋಟೋ ನೋಡಿಕೊಂಡಾಗ, ಅವನ ನೆರಳು ಅವನ ಪಕ್ಕದಲ್ಲಿರದೆ, ಕ್ಯಾಮೆರಾದ ಫ್ರೇಮ್‌ನ ಮೂಲೆಯಲ್ಲಿ ನಿಂತು ಅವನನ್ನೇ ನೋಡುತ್ತಿರುವಂತೆ ಭಾಸವಾಯಿತು. ಅವನ ಮೈ ಬೆವರತೊಡಗಿತು. ತಕ್ಷಣ ಅವನು ರೂಮಿನ ಲೈಟ್ ಆನ್ ಮಾಡಲು ಹೋದರೆ, ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಹೊರಗೆ ಚಂದಿರನ ಬೆಳಕು ಬೆಳ್ಳಿಯಂತೆ ಚೆಲ್ಲಿತ್ತು. ವಿಕ್ರಮ್ ಕಿಟಕಿಯಿಂದ ಹೊರಗೆ ನೋಡಿದನು. ಹಳ್ಳಿಯ ಪ್ರತಿಯೊಬ್ಬ ನಿವಾಸಿಯೂ ಮೌನವಾಗಿ ಬೀದಿಯಲ್ಲಿ ನಡೆದು ಹೋಗುತ್ತಿದ್ದರು. ಆದರೆ ಅವರೆಲ್ಲರೂ ಕಣ್ಣು ಮುಚ್ಚಿ ನಡೆಯುತ್ತಿದ್ದರು. ಅವರ ಹಿಂದೆ ಅವರ ನೆರಳುಗಳು ಮರಳಿನ ಮೇಲೆ ದೈತ್ಯಾಕಾರವಾಗಿ ಬೆಳೆದು ನಿಂತಿದ್ದವು.
ಒಂದು ಕ್ಷಣದಲ್ಲಿ, ಆ ನೆರಳುಗಳು ತಮ್ಮ ಮಾಲೀಕರಿಂದ ಬೇರ್ಪಟ್ಟವು, ಅವು ಸ್ವತಂತ್ರವಾಗಿ ಚಲಿಸುತ್ತಾ, ಧರ್ಮಶಾಲೆಯತ್ತ ವಿಕ್ರಮ್‌ನ ವಾಸನೆ ಹಿಡಿದು ಬರಲು ಆರಂಭಿಸಿದವು. ವಿಕ್ರಮ್ ರೂಮಿನ ಬಾಗಿಲು ಹಾಕಿಕೊಂಡನು. ಆದರೆ ನೆರಳುಗಳಿಗೆ ಬಾಗಿಲು ತಡೆಯಾಗುವುದಿಲ್ಲವಲ್ಲ,  ಬಾಗಿಲಿನ ಕೆಳಗಿನ ಸಣ್ಣ ಸಂಧಿಯಿಂದ ಕಪ್ಪು ಬಣ್ಣದ ಹೊಗೆಯಂತಹ ನೆರಳುಗಳು ಒಳಗೆ ಬರಲಾರಂಭಿಸಿದವು. ಅವನು ತನ್ನ ಟಾರ್ಚ್ ಆನ್ ಮಾಡಿದನು. ತೀವ್ರವಾದ ಬೆಳಕು ಬಿದ್ದ ತಕ್ಷಣ ಆ ನೆರಳುಗಳು ಹಿಂದಕ್ಕೆ ಸರಿದವು. ಬೆಳಕು, ಬೆಳಕೇ ನನ್ನ ಆಯುಧ ಎಂದು ಅವನು ಅರಿತುಕೊಂಡನು. ವಿಕ್ರಮ್ ತನ್ನ ಜೀಪ್‌ನತ್ತ ಓಡಲು ನಿರ್ಧರಿಸಿದನು. ಕೈಯಲ್ಲಿ ಟಾರ್ಚ್ ಹಿಡಿದು ಹೊರಬಂದಾಗ, ಇಡೀ ಗ್ರಾಮದ ನೆರಳುಗಳು ಅವನನ್ನು ಸುತ್ತುವರಿದವು. ಅವು ಅವನ ಕಿವಿಯಲ್ಲಿ ಪಿಸುಗುಡುತ್ತಿದ್ದವು. ಅವನ ಹಳೆಯ ನೆನಪುಗಳು, ಅವನ ಭಯಗಳು, ಅವನ ರಹಸ್ಯಗಳು. ಆ ನೆರಳುಗಳು ಮನುಷ್ಯನ ಮನಸ್ಸನ್ನು ಓದಬಲ್ಲವು. ಅವನು ಜೀಪ್ ಹತ್ತಿ ಇಂಜಿನ್ ಸ್ಟಾರ್ಟ್ ಮಾಡಿದನು. ಹೆಡ್‌ಲೈಟ್‌ಗಳ ತೀವ್ರ ಬೆಳಕಿನಲ್ಲಿ ಆ ನೆರಳುಗಳು ಚಲ್ಲಾಪಿಲ್ಲಿಯಾದವು. ಅವನು ಮರಳಿನ ಹಾದಿಯಲ್ಲಿ ಜೀಪ್ ಓಡಿಸಿದನು. ಆದರೆ ಮರುಭೂಮಿ ಅವನಿಗೆ ದಾರಿ ತೋರಿಸುತ್ತಿರಲಿಲ್ಲ. ಎತ್ತ ನೋಡಿದರೂ ಅದೇ ಬಾವಿ, ಅದೇ ದೇವಸ್ಥಾನ, ಅದೇ ಮುದಿ ಮನುಷ್ಯ. ಇದು 'ಮರೀಚಿಕೆಯ ಚಕ್ರವ್ಯೂಹ, ಆಗ
ಅವನಿಗೆ ನೆನಪಾಯಿತು, ರಹೀಮ್ ಚಾಚಾ ಹೇಳಿದ್ದ ಮಾತು ಕತ್ತಲೆಯಲ್ಲೇ ಬೆಳಕನ್ನು ಹುಡುಕು. ವಿಕ್ರಮ್ ಒಂದು ಸಾಹಸ ಮಾಡಿದನು. ಅವನು ಜೀಪ್‌ನ ಎಲ್ಲ ಲೈಟ್‌ಗಳನ್ನು ಆಫ್ ಮಾಡಿದನು. ಸಂಪೂರ್ಣ ಕತ್ತಲೆ. ಅವನ ಕಣ್ಣುಗಳಿಗೆ ಈಗ ಮರಳಿನ ಮೇಲಿದ್ದ ರಹಸ್ಯ ಹಾದಿ ಕಾಣಿಸತೊಡಗಿತು. ನೆರಳುಗಳಿಗೆ ಅಸ್ತಿತ್ವವಿರುವುದು ಬೆಳಕಿದ್ದಾಗ ಮಾತ್ರ. ಕತ್ತಲೆಯಲ್ಲಿ ನೆರಳುಗಳಿಗೆ ಶಕ್ತಿ ಇರುವುದಿಲ್ಲ. ಅವನು ಕತ್ತಲೆಯಲ್ಲೇ ವೇಗವಾಗಿ ಜೀಪ್ ಓಡಿಸಿ ಗ್ರಾಮದ ಗಡಿಯನ್ನು ದಾಟಿದನು. ಸೂರ್ಯೋದಯದ ಮೊದಲ ಕಿರಣಗಳು ಭೂಮಿಗೆ ಸ್ಪರ್ಶಿಸಿದಾಗ ವಿಕ್ರಮ್ ಹೆದ್ದಾರಿಯಲ್ಲಿದ್ದನು. ಅವನು ನಿಟ್ಟುಸಿರು ಬಿಟ್ಟನು. ತನ್ನ ಬದುಕುಳಿದ ಸಂಭ್ರಮದಲ್ಲಿ ಕ್ಯಾಮೆರಾ ತೆಗೆದು ಒಂದು ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡನು. ಫೋಟೋ ನೋಡಿದ ವಿಕ್ರಮ್‌ನ ರಕ್ತ ಹೆಪ್ಪುಗಟ್ಟಿತು. ಫೋಟೋದಲ್ಲಿ ವಿಕ್ರಮ್ ಇದ್ದನು, ಅವನ ಹಿಂದೆ ಸೂರ್ಯನ ಬೆಳಕಿತ್ತು. ಆದರೆ ಅವನ ಕೆಳಗೆ ಬೀಳಬೇಕಿದ್ದ ನೆರಳು ಅವನದ್ದಾಗಿರಲಿಲ್ಲ. ಅದು ಆ ಮುದಿ ರಹೀಮ್ ಚಾಚಾನ ನೆರಳಾಗಿತ್ತು. ಮತ್ತು ಕ್ಯಾಮೆರಾದ ಹಿನ್ನೆಲೆಯಲ್ಲಿ, ಸವರ್ಣಗಡ ಗ್ರಾಮವು ನಿಧಾನವಾಗಿ ಮರಳಿನೊಳಗೆ ಹೂತು ಹೋಗುತ್ತಿತ್ತು, ಜಸ್ಟ್ ಒಂದು ಮರೀಚಿಕೆಯಂತೆ. ವಿಕ್ರಮ್ ತನ್ನ ಕೈಗಳನ್ನು ನೋಡಿಕೊಂಡನು. ಅವನ ಚರ್ಮ ನಿಧಾನವಾಗಿ ಮರಳಿನ ಬಣ್ಣಕ್ಕೆ ತಿರುಗುತ್ತಿತ್ತು. ಅವನು ಆ ಗ್ರಾಮದಿಂದ ಹೊರಬಂದಿರಲಿಲ್ಲ, ಬದಲಾಗಿ ಆ ಗ್ರಾಮದ ಒಂದು ಭಾಗವಾಗಿ ಹೋಗಿದ್ದನು. ನಿಜವಾದ ವಿಕ್ರಮ್ ಈಗಲೂ ಆ ಸವರ್ಣಗಡದ ಬಾವಿಯ ಬಳಿ ತನ್ನ ನೆರಳನ್ನು ಕಳೆದು ಕೊಂಡು ಕಣ್ಣು ಮುಚ್ಚಿ ಕುಳಿತಿದ್ದಾನೆ.