ನಂದನೂರಿನ ಮೂರು ಹೃದಯಗಳು
(ಕೂಲಿ ಕಾರ್ಮಿಕರ ಬದುಕು-ಪ್ರೇಮ ಕಥೆ)
ಲೇಖಕ–ವಾಮನಾಚಾರ್ಯ
ಬೆಂಗಳೂರು ನಗರದಿಂದ ಇಪ್ಪತ್ತೈದು ಕಿಲೋಮೀಟರ್ ದೂರ ಇರುವ ಬಡಾವಣೆ ನಂದನೂರು. ವಿವೇಕಾನಂದ ಮುಖ್ಯ ರಸ್ತೆ ಪಕ್ಕದಲ್ಲಿ ಬಹು ಮಹಡಿ ಅಂತಸ್ತಿನ ವಿಶಾಲವಾದ ಕಲ್ಯಾಣ್ ಮಹೇಶ್ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಕಟ್ಟಡ ಕೆಲಸ ಭರದಿಂದ ಸಾಗುತ್ತಿತ್ತು. ವಿಶೇಷವೆಂದರೆ, ಬಿಲ್ಡರ್ ರಿಂದ ಹಿಡಿದು ಕೂಲಿ ಕಾರ್ಮಿಕ ರೆಲ್ಲರೂ ಉತ್ತರ ಕರ್ನಾಟಕದವರೇ ಆಗಿದ್ದರು.
ಕಲಬುರ್ಗಿ ಜಿಲ್ಲೆಯ ಯಾಳಗಿಯಿಂದ ಬಂದ ಇಪ್ಪತ್ತೈದು ವರ್ಷದ ಯುವಕ ಶಿವು ಗಾರೆ ಕೆಲಸ ಮಾಡುತ್ತಿದ್ದ. ಬಿಲ್ಡರ್ ಸೋಮಶೇಖರ್ ಪಾಟೀಲ್ ಅವರಿಗೆ ಗೆ ಅತ್ಯಂತ ನಂಬಿಕಸ್ಥ. ಶಿವು ತನ್ನ ತಾಯಿ ಗಂಗಮ್ಮ ಜೊತೆಗೆ ಶೆಡ್ ನಲ್ಲಿ ವಾಸವಾಗಿದ್ದ.
ರಾಯಚೂರು ಹತ್ತಿರ ಇರುವ ಗುಂಜನಾಳ ಗ್ರಾಮದ ಕೂಲಿ ಕೆಲಸ ಮಾಡಲು ಬಂದ ತೆಳ್ಳಗೆ,ಬೆಳ್ಳಗೆ, ನೀಟಾದ ಜಡೆ ಇರುವ ಹದಿನೆಂಟರ ಸುಂದರ ಹುಡುಗಿ ಅಂಬಿ ಅವನ ಪ್ರೇಯಸಿ. ಅಂಬಿಗೆ ಕೂಡಾ ಶಿವು ಎಂದರೆ ಅಪಾರ ಪ್ರೀತಿ. ಇಬ್ಬರೂ ಶೀಘ್ರದಲ್ಲೇ ಮದುವೆ ಆಗಿ ಎಂದು ಶಿವು ನ ತಾಯಿ ಗಂಗಮ್ಮ ನ ಒತ್ತಾಯಿಸುತ್ತಿದ್ದಳು.
ಸುಮಾರು ಒಂದು ತಿಂಗಳು ಹಿಂದೆ ಪಾರು ಎಂಬ ತಮಿಳುನಾಡಿನ ಯುವತಿ ಕೂಲಿ ಕೆಲಸಕ್ಕೆ ಅದೇ ಕಟ್ಟಡಕ್ಕೆ ಬಂದಳು. ತಮಿಳು ಮಾತೃಭಾಷೆ ಇದ್ದರೂ ಕನ್ನಡದಲ್ಲಿ ಸರಾಗವಾಗಿ ಮಾತನಾಡುತ್ತಿದ್ದಳು. ಅನಾಥೆಯಾದ ಪಾರು ಬೆಳಗಿನಿಂದ ಸಂಜೆಯವರೆಗೆ ದುಡಿದು ಶೆಡ್ ನ ಒಂದು ಮೂಲೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು.
ಒಂದು ದಿವಸ ಇದ್ದಕ್ಕಿದ್ದಂತೆ ಅಂಬಿ ತನ್ನ ಅಪ್ಪ ಅಮ್ಮ ನನ್ನು ನೋಡಲು ಮುಂಬಯಿಗೆ ಹೋದಳು. ಅವರು ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಯಾರಿಗೂ ಹೇಳದೇ ಅಂಬಿ ಹೋಗಿಬಿಟ್ಟಳು. ಹದಿ ನೈದು ದಿವಸ ನಂತರ ವಾಪಸ್ ಬಂದಳು.
ಒಂದು ಬೆಳಗ್ಗೆ ಸುಮಾರು ಎಂಟು ಗಂಟೆಗೆ, ಪಾರು ಮತ್ತು ಅಂಬಿ ಕೆಲಸ ಬಿಟ್ಟು ಹೊರಗೆ ಬಂದು ಜಗಳ ಆರಂಭಿಸಿದರು.
“ಏ ಪಾರು, ನಾನು ನಮ್ಮ ಊರಿಗೆ ಹೋಗಿ ಬರುದ್ರೊಳಗೆ ಶಿವುಗೆ ಏನು ಮಂತ್ರ ಮಾಡಿದೆ ನೀನು? ದಿನದಿಂದ ದಿನಕ್ಕೆ ನಿಮ್ಮಿಬ್ಬರ ಚೆಲ್ಲಾಟ ಹೆಚ್ಚಾಗಿದೆ. ಇನ್ನು ಮುಂದೆ ನೀ ಶಿವು ಜೊತೆಗೆ ಕಾಣಿಸಿದರೆ ನಿನ್ನ ಕಾಲು ಮುರಿಯುತ್ತೇನೆ!” ಎಂದು ಅಂಬಿ ಕೋಪದಿಂದ ಕೂಗಿದಳು.
ಪಾರು ಕೂಡಾ ಸಿಡಿದೆದ್ದಳು.
“ಅಂಬಿ ಬಾಯಿ ಹರಿ ಬಿಡಬ್ಯಾಡ. ಇದನ್ನ ಶಿವುಗೆ ಕೇಳು. ನಾನು ನಿನಗಿಂತ ಚೆಲುವೆ ಎಂದು ಅವನೇ ಹೆಳಿದ!”
ಮಾತಿನ ಜಗಳ ಕೈ ಕೈಗೆ ತಲುಪಿತು.
ಅದನ್ನು ನೋಡುತ್ತಿದ್ದ ಶಿವು ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ಬಿಡಿಸಲು ಹೋದ. ಮೊದಲು ಅವನಿಗೆ ತಮಾಷೆ ಅನಿಸಿತು. ಆದರೆ ಜಗಳ ಅತಿರೇಕಕ್ಕೆ ಹೋದಾಗ ಅವನು ತಡೆಯಲು ಯತ್ನಿಸಿದ.
ಆ ಕ್ಷಣದಲ್ಲಿ ಅಂಬಿ ಕೋಪದಿಂದ ಶಿವುಗೆ ಛೀಮಾರಿ ಹಾಕಿ ಸಿಟ್ಟಿನಿಂದ ಅವನನ್ನು ತಳ್ಳಿದಳು. ಇನ್ನೇನು ಅವನು ಪಕ್ಕದಲ್ಲಿ ಇರುವ ನೀರು ತುಂಬಿದ ಟ್ಯಾಂಕ್ ನಲ್ಲಿ ಬೀಳುವುದ ಕ್ಕೂ ಪಾರು ಬಂದು ಅವನನ್ನು ತನ್ನ ಶಕ್ತಿ ಮೀರಿ ಎಳೆಯುವ ದಕ್ಕೂ,ಅವರಿಬ್ಬರ ಅಪ್ಪುಗೆ ಆಯಿತು. ಆಮೇಲೆ ಅವರು ಆಲಿಂಗನ ಅರಿತು ದೂರ ಸರಿದರು. ಶಿವು ಅಪಾಯದಿಂದ ಪಾರಾದ.
ಅಂಬಿ ಗೆ ತಾನು ಮಾಡಿದ್ದು ತಪ್ಪು ಅರ್ಥವಾಯಿತು. ಅವಳು ಶಿವುಗೆ ಕಾಲು ಮುಟ್ಟಲು ಬಂದಳು.
“ಶಿವು ಕ್ಷಮಿಸು…ನಾನು ಸಿಟ್ಟಿನ ಆವೇಶದಲ್ಲಿ ತಪ್ಪು ಮಾಡಿದೆ.”
ಆದರೆ ಪಾರು ಮೇಲೆ ಇರುವ ಇದ್ದ ಕೋಪ ಮಾತ್ರ ಅವಳ ಮನಸ್ಸಿನಲ್ಲಿ ಹಾಗೆ ಉಳಿಯಿತು.
ಶಿವು ಮೃದುವಾಗಿ ಕೇಳಿದನು:
“ಅಂಬಿ ನಿನ್ನನ್ನು ಪ್ರೀತಿಸಿದ್ದೇನೆ. ಆದರೆ ನೀನು ನನಗೆ ಹೇಳದೇ ಊರಿಗೆ ಏಕೆ ಹೋದೆ?”
ಅಂಬಿ ಉತ್ತರಿಸಿದಳು:
“ ಶಿವು, ನನ್ನ ಅಪ್ಪ ಅಮ್ಮ ಇಬ್ಬರೂ ನಮ್ಮಂತೆ ಕೂಲಿಕಾರರು. ಅವರು ಮುಂಬಯಿ ಯಲ್ಲಿ ಕಟ್ಟಡದಲ್ಲಿ ಕೆಲಸ ಮಾಡುವಾಗ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದರು. ಅದಕ್ಕಾಗಿ ನಾನು ಗಡಿಬಿಡಿಯಲ್ಲಿ ಹೋಗಬೇಕಾಯಿತು. ಇದು ತಪ್ಪೇ?”
ಶಿವು ನಿಟ್ಟುಸಿರು ಬಿಟ್ಟನು.
“ನೀನು ಊರಿಗೆ ಹೋದ ನಂತರ ಅಮ್ಮನ ಆರೋಗ್ಯ ತುಂಬಾ ಹದಗೆಟ್ಟಿತು. ಡಾಕ್ಟರ್, ಆಕೆ ಒಂದು ವಾರ ಬದುಕಬಹುದು ಎಂದರು.ನೀನು ಒಂದು ಸಲವೂ ಫೋನ್ ಮಾಡಲಿಲ್ಲ. ಆ ರಾತ್ರಿ ಅಮ್ಮನ ಸೇವೆ ಮಾಡಿದವರು ಯಾರು ಗೊತ್ತೇ?”
“ನೀನೆ ತಾನೆ?” ಎಂದು ಅಂಬಿ ಹೇಳಿದಳು.
“ನನಗಿಂತಲೂ ಹೆಚ್ಚು ಸೇವೆ ಮಾಡಿದವಳು ಪಾರು.”
ಅಂಬಿ ಬೆಚ್ಚಿ ಬಿದ್ದಳು.
“ಏನು ಮಾಡಿದಳು ಅವಳು?”
ಶಿವು ಹೇಳ ತೊಡಗಿದನು.
ಆ ರಾತ್ರಿ ಅಮ್ಮನ ಪರಿಸ್ಥಿತಿ ಗಂಭೀರ ವಾಯಿತು. ನನಗೆ ದಿಕ್ಕು ತೋಚದೇ ಒದ್ದಾಡಿದೆ. ಆ ಸಮಯ ಪಾರು ನನಗೆ ಆಗಿರುವ ದು:ಖ ನೋಡಿ ತಡೆಯಲು ಆಗದೇ ಎದುರುಗಡೆ ಇರುವ ಮಾರುತಿ ಕ್ಲಿನಿಕ್ ಹೋಗಿ ಡಾಕ್ಟರ್ ಗೆ ಬರಲು ಬೇಡಿಕೊಂಡಳು.
“ಕ್ಲಿನಿಕ್ ಸಮಯ ಮುಗಿಯಿತು ನಾಳೆ ಬಾ,” ಎಂದರು ಡಾಕ್ಟರ್ ಕೋಪದಿಂದ.
“ಡಾಕ್ಟರ್, ನಿಮಗೆ ಕೈ ಜೋಡಿಸಿ ಬೇಡಿಕೊಳ್ಳುತ್ತೇನೆ. ಅಮ್ಮನ ಪರಿಸ್ಥಿತಿ ಗಂಭೀರ. ನೀವು ಒಂದು ಜೀವ ಉಳಿಸಿದರೆ ದೇವರು ನಿಮಗೆ ಖಂಡಿತ ಒಳ್ಳೆಯದು ಮಾಡುವನು.”
“ನನಗೆ ಉಪದೇಶ ಮಾಡಬೇಡ ಹೋಗು,” ಎಂದರು. ಕ್ಲಿನಿಕ್ ನಲ್ಲಿ ಕೆಲಸ ಮಾಡುವ ಹುಡುಗ ಆಸ್ಪತ್ರೆ ಬಾಗಿಲು ಮುಚ್ಚಲು ಬಂದ.
ಆ ಸಮಯದಲ್ಲಿ ಪಾರು,
“ನೀವು ಡಾಕ್ಟರ್ ಪದವಿ ತೆಗೆದುಕೊಳ್ಳುವಾಗ ಪ್ರಮಾಣ ವಚನ ಏನು ಮಾಡಿದಿರಿ? ಅದನ್ನು ಮರೆತು ಬಿಟ್ಟಿರಾ?. ನೀವು ಈಗ ಬರುವುದಿಲ್ಲ ಎಂದರೆ ಇಡೀ ರಾತ್ರಿ ನಿಮ್ಮ ಕ್ಲಿನಿಕ್ ಹೊರಗೆ ಉಪವಾಸ ಸತ್ಯಾಗ್ರಹ ಮಾಡುವೆ. ನನಗೆ ಏನಾದರೂ ಆದರೆ ಅದಕ್ಕೆ ನೀವೇ ಜವಾಬ್ದಾರರು,”
ಎಂದಳು ರೌದ್ರಾವತಾರದಿಂದ.
ಕೂಲಿ ಕೆಲಸ ಮಾಡುವ ಹುಡುಗಿ ಸುಶಿಕ್ಷಿತರ ಹಾಗೆ ಮಾತಾಡುವುದನ್ನು ನೋಡಿ ಡಾಕ್ಟರ್ ಗೆ ಆಶ್ಚರ್ಯ ಅಷ್ಟೇ ಅಲ್ಲ ಕನಿಕರ ಬಂದು,
“ನಡೆ ಹೋಗೋಣ,” ಎಂದರು.
ಶೆಡ್ ಗೆ ಬಂದು ಗಂಗಮ್ಮ ನಿಗೆ ಪರೀಕ್ಷೆ ಮಾಡಿ ತಮ್ಮ ಬ್ಯಾಗ್ ನಲ್ಲಿ ಇರುವ ಮಾತ್ರೆಗಳನ್ನು ಕೊಟ್ಟು ಸಧ್ಯ ಎರಡು ಮಾತ್ರೆಗಳು ಕೊಟ್ಟು ಅವರು ಹತ್ತು ನಿಮಿಷ ಕುಳಿತರು. ಗಂಗಮ್ಮ ಚೇತರಿಸುವದನ್ನು ನೋಡಿ ಡಾಕ್ಟರ್ ಹೊರಟರು. ಫೀಸ್ ಬೇಡ ಮತ್ತೆ ನಾಳೆ ಬೆಳಗ್ಗೆ ಬಾ,” ಎಂದರು.
ಇದು ಕೇಳಿದ ಅಂಬಿಗೆ ಕಣ್ಣು ತುಂಬಿತು.
ಅಷ್ಟರಲ್ಲಿ ಪಾರು,
“ನಿಮ್ಮ ಪ್ರೀತಿಯಲ್ಲಿ ನಾನು ಅಡ್ಡ ಬರುವುದಿಲ್ಲ. ಮದುವೆ ಮಾಡಿಕೊಂಡು ಸಂತೋಷದ ಜೀವನ ಸಾಗಿಸಿ,” ಎಂದು ಹೇಳಿ ಅಲ್ಲಿಂದ ಹೊರಟಳು.
ಪಾರು ಎಲ್ಲಿಗೆ ಹೋದಳು ಎನ್ನುವದು ನಿಗೂಢವಾಗಿ ಉಳಿಯಿತು. ಶೆಡ್ ಮೂಲೆಯಲ್ಲಿ ಅವಳ ನೆನಪು ಮಾತ್ರ ಉಳಿಯಿತು.
ಶಿವು ಮತ್ತು ಅಂಬಿ ಬದುಕಿನಲ್ಲಿ ಒಂದು ಪಾಠ ಕಲಿತರು.
ಪ್ರೀತಿ ಎಂದರೆ ಕೇವಲ ಒಡನಾಟವಲ್ಲ… ಪ್ರೀತಿ ಎಂದರೆ ತ್ಯಾಗ, ಮಾನವೀಯತೆ ಹಾಗೂ ಪರೋಪಕಾರ.