Are you a hero or a villain? in Kannada Thriller by Sandeep Joshi books and stories PDF | ನೀನು ನಾಯಕನೋ ಖಳನಾಯಕನೊ

Featured Books
Categories
Share

ನೀನು ನಾಯಕನೋ ಖಳನಾಯಕನೊ

ಬೆಂಗಳೂರಿನ ಸೆಂಟ್ರಲ್ ಜೈಲಿನ ಆ ಗಾಳಿ ಬೆಳಕಿಲ್ಲದ ಕೋಣೆಯಲ್ಲಿ ದರ್ಶನ್ ಕುಳಿತಿದ್ದ. ಅವನ ಸುತ್ತಲೂ ಬಿಗಿ ಭದ್ರತೆ ಇತ್ತು. ಹದಿನೈದು ದಿನಗಳಿಂದ ಇಡೀ ದೇಶದ ಮಾಧ್ಯಮಗಳಲ್ಲಿ ಅವನದೇ ಚರ್ಚೆ. ಪೊಲೀಸರ ಪಾಲಿಗೆ ಅವನು ಸೈಬರ್ ಭಯೋತ್ಪಾದಕ ಆಸ್ಪತ್ರೆಗಳ ಮಾಲೀಕರ ಪಾಲಿಗೆ ರಾಕ್ಷಸ ಆದರೆ ಸಾವಿರಾರು ಬಡ ರೋಗಿಗಳ ಪಾಲಿಗೆ ಅವನು ಅನಾಮಧೇಯ ದೇವದೂತ. ಪ್ರಖ್ಯಾತ ತನಿಖಾ ಪತ್ರಕರ್ತೆ ಅನನ್ಯಾ ಅವನನ್ನು ಸಂದರ್ಶಿಸಲು ಜೈಲಿಗೆ ಬಂದಳು. ಕಬ್ಬಿಣದ ಸರಳುಗಳ ಆಚೆ ಕುಳಿತಿದ್ದ ದರ್ಶನ್‌ನ ಮುಖದಲ್ಲಿ ಯಾವುದೇ ಭಯವಿರಲಿಲ್ಲ. ಅನನ್ಯಾ ತನ್ನ ಧ್ವನಿಮುದ್ರಕವನ್ನು ಆನ್ ಮಾಡಿ ಕೇಳಿದಳು ದರ್ಶನ್, ನೀನು ನಾಯಕನೋ ಖಳನಾಯಕನೋ? ಸಾವಿರಾರು ಕೋಟಿ ಹಣವನ್ನು ಹ್ಯಾಕ್ ಮಾಡುವುದು ನಾಯಕತ್ವವೇ? ದರ್ಶನ್ ಒಂದು ಕ್ಷಣ ಕಿರುನಗೆ ಬೀರಿ ಹೇಳಿದ ಮೇಡಂ ಬಿಳಿ ಬಟ್ಟೆ ಧರಿಸಿದವರೆಲ್ಲ ನಾಯಕರಲ್ಲ, ಜೈಲಿನಲ್ಲಿರುವವರೆಲ್ಲ ಖಳನಾಯಕರಲ್ಲ. ನನ್ನ ಕಥೆ ಶುರುವಾಗುವುದು ಆ ಒಂದು ಫೋನ್ ಕರೆಯಿಂದ.
ಆರು ತಿಂಗಳ ಹಿಂದೆ ದರ್ಶನ್ ಒಬ್ಬ ಉನ್ನತ ಮಟ್ಟದ ಸೈಬರ್ ಸೆಕ್ಯೂರಿಟಿ ಎಕ್ಸ್‌ಪರ್ಟ್ ಆಗಿದ್ದ. ದೊಡ್ಡ ಕಂಪನಿಗಳ ಸರ್ವರ್‌ಗಳನ್ನು ಸುರಕ್ಷಿತವಾಗಿಡುವುದು ಅವನ ಕೆಲಸವಾಗಿತ್ತು. ಅವನ ಪ್ರಪಂಚವೆಂದರೆ ಅವನ ತಂಗಿ ಕಾವ್ಯಾ. ಅವಳು ಮೆಡಿಕಲ್ ಓದುತ್ತಿದ್ದ ಚುರುಕಾದ ಹುಡುಗಿ. ಆದರೆ ಆ ಒಂದು ದಿನ ಎಲ್ಲವೂ ಬದಲಾಯಿತು. ಕಾವ್ಯಾಳಿಗೆ ಸಣ್ಣದೊಂದು ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತು. ದರ್ಶನ್ ಅವಳನ್ನು ನಗರದ ಅತ್ಯಂತ ಪ್ರತಿಷ್ಠಿತ ಗ್ಲೋಬಲ್ ಮೆಡಿಕಲ್ ಸೆಂಟರ್'ಗೆ ದಾಖಲಿಸಿದ. ಅಲ್ಲಿನ ಮುಖ್ಯಸ್ಥ ಡಾ. ರಾಜಶೇಖರ್ ರಾಜ್ಯದ ಅತ್ಯಂತ ಪ್ರಭಾವಿ ವ್ಯಕ್ತಿ. ಅಲ್ಲಿ ಕಾವ್ಯಾಳನ್ನು ದಾಖಲಿಸಿದ ಮೂರೇ ದಿನಕ್ಕೆ, ಆಸ್ಪತ್ರೆಯವರು ಮಲ್ಟಿ ಆರ್ಗನ್ ಫೈಲ್ಯೂರ್ ಎಂದು ಘೋಷಿಸಿ ಐದು ಲಕ್ಷ ರೂಪಾಯಿ ಬಿಲ್ ನೀಡಿದರು. ಹಣ ಕಟ್ಟಿದರೂ ಕಾವ್ಯಾ ಬದುಕಲಿಲ್ಲ. ದರ್ಶನ್‌ಗೆ ಅನುಮಾನ ಬಂತು. ಕಾವ್ಯಾಳಿಗೆ ಅಂತಹ ಗಂಭೀರ ಸ್ಥಿತಿ ಇರಲಿಲ್ಲ. ಅವನು ಸದ್ದಿಲ್ಲದೆ ಆಸ್ಪತ್ರೆಯ ಸರ್ವರ್ ಒಳಗೆ ನುಗ್ಗಿದ. ಅಲ್ಲಿ ಅವನಿಗೆ ಸಿಕ್ಕ ಸತ್ಯಗಳು ಭಯಾನಕವಾಗಿದ್ದವು. ಆಸ್ಪತ್ರೆಯು ಉದ್ದೇಶಪೂರ್ವಕವಾಗಿ ರೋಗಿಗಳಿಗೆ ತಪ್ಪು ಚುಚ್ಚುಮದ್ದು ನೀಡಿ ಅವರ ಅಂಗಾಂಗಗಳನ್ನು ಅಂತರಾಷ್ಟ್ರೀಯ ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತಿತ್ತು. ಕಾವ್ಯಾ ಕೂಡ ಇದೇ ಮಾಫಿಯಾಕ್ಕೆ ಬಲಿಯಾಗಿದ್ದಳು. ದರ್ಶನ್ ಪೋಲೀಸರಿಗೆ ದೂರು ನೀಡಿದ. ಆದರೆ ರಾಜಶೇಖರ್‌ನ ಪ್ರಭಾವದಿಂದ ದೂರು ಕಸದ ಬುಟ್ಟಿ ಸೇರಿತು. ಅಂದು ದರ್ಶನ್ ನಿರ್ಧರಿಸಿದ ಕಾನೂನು ಮೌನವಾದರೆ ನನ್ನ ತಂತ್ರಜ್ಞಾನದ  ಮೂಲಕ ಶಿಕ್ಷೆ ನೀಡಲು ನಿರ್ಧರಿಸಿದ.
ಅವನು ಒಂಟಿ ಹಕ್ಕಿ ಎಂಬ ಅನಾಮಧೇಯ ಹ್ಯಾಕರ್ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿದ. ಮೊದಲು ರಾಜಶೇಖರ್ ಮತ್ತು ಅವನ ತಂಡದ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿದ. ಅದರಲ್ಲಿ ಇದ್ದದ್ದು ಅಕ್ರಮವಾಗಿ ಸಂಗ್ರಹಿಸಿದ 500 ಕೋಟಿ ರೂಪಾಯಿ ಕಪ್ಪು ಹಣ. ಅಂದು ರಾತ್ರಿ 12 ಗಂಟೆಗೆ, ಆಸ್ಪತ್ರೆಯ ಸರ್ವರ್ ಅನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ ದರ್ಶನ್, ಒಂದು ಕ್ರಾಂತಿಕಾರಿ ಕೆಲಸ ಮಾಡಿದ. ಲೈವ್ ಆಗಿ ರೋಗಿಗಳ ಸಾಲದ ಪಟ್ಟಿಯನ್ನು ಡಿಲೀಟ್ ಮಾಡಿದ. ಮಾತ್ರವಲ್ಲದೆ, ಆಸ್ಪತ್ರೆಯ ಅಕ್ರಮ ಹಣವನ್ನು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಡವರ ಅಕೌಂಟ್‌ಗಳಿಗೆ ವರ್ಗಾಯಿಸಿದ.
ರಾಜಶೇಖರ್ ತನ್ನ ಸ್ಕ್ರೀನ್ ಮೇಲೆ ನೋಡುತ್ತಿದ್ದಂತೆಯೇ ಅವನ ಸಾಮ್ರಾಜ್ಯ ಕರಗಿ ಹೋಗುತ್ತಿತ್ತು. ಅವನು ಪೋಲೀಸರಿಗೆ ಫೋನ್ ಮಾಡಿ ನನ್ನ ಆಸ್ತಿ ಕಳ್ಳತನವಾಗುತ್ತಿದೆ ಎಂದು ಕಿರುಚಿದ. ಆದರೆ ದರ್ಶನ್ ಅಷ್ಟರಲ್ಲೇ ರಾಜಶೇಖರ್ ಮಾಡಿದ್ದ ಅಕ್ರಮ ಅಂಗಾಂಗ ವ್ಯಾಪಾರದ ಎಲ್ಲ ವೀಡಿಯೊಗಳನ್ನು ಡಾರ್ಕ್ ವೆಬ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಸ್ಟ್ರೀಮ್ ಮಾಡಿದ್ದ. ನಗರದಾದ್ಯಂತ ರೆಡ್ ಅಲರ್ಟ್ ಘೋಷಿಸಲಾಯಿತು. ದರ್ಶನ್ ತನ್ನ ಹಳೆಯ ಫಿಯೆಟ್ ಕಾರಿನಲ್ಲಿ ಲ್ಯಾಪ್‌ಟಾಪ್ ಇಟ್ಟುಕೊಂಡು ಚಲಿಸುತ್ತಲೇ ಹ್ಯಾಕಿಂಗ್ ಮಾಡುತ್ತಿದ್ದ. ಪೋಲೀಸರು ಅವನ ಲೊಕೇಶನ್ ಟ್ರ್ಯಾಕ್ ಮಾಡಲು ಹರಸಾಹಸ ಪಡುತ್ತಿದ್ದರು. ದರ್ಶನ್ ಟ್ರಾಫಿಕ್ ಸಿಗ್ನಲ್‌ಗಳನ್ನು ಹ್ಯಾಕ್ ಮಾಡಿ ಪೋಲೀಸ್ ವಾಹನಗಳನ್ನು ತಪ್ಪುದಾರಿಗೆ ಎಳೆದ. ಒಂದು ಹಂತದಲ್ಲಿ, ದರ್ಶನ್ ಬೆಂಗಳೂರಿನ ಅತಿ ಎತ್ತರದ ಕಟ್ಟಡವೊಂದರ ಮೇಲೆ ಸಿಕ್ಕಿಬಿದ್ದ. ಸುತ್ತಲೂ ಕಮಾಂಡೋಗಳು ಗನ್ ಹಿಡಿದು ನಿಂತಿದ್ದರು. ರಾಜಶೇಖರ್ ಕೂಡ ಅಲ್ಲಿಗೆ ಬಂದಿದ್ದ. ದರ್ಶನ್, ನೀನು ಸತ್ತರೂ ಆ ಸಾಕ್ಷ್ಯಗಳು ಹೊರಬರಬಾರದು ಎಂದು ರಾಜಶೇಖರ್ ಗನ್ ಎತ್ತಿದ. ಆದರೆ ದರ್ಶನ್ ನಕ್ಕ. ನಾನು ಇಲ್ಲಿಗೆ ಬಂದಿದ್ದು ತಪ್ಪಿಸಿಕೊಳ್ಳಲು ಅಲ್ಲ, ನಿನ್ನನ್ನು ಅಂತಿಮವಾಗಿ ಮುಗಿಸಲು. ನಾನು ಈಗಾಗಲೇ ಎಂಟರ್ ಕೀ ಒತ್ತಿದ್ದು ಈ ಎಲ್ಲಾ ದಾಖಲೆಗಳು ಸಿಬಿಐ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ತಲುಪಿವೆ. ಈಗ ನೀನು ಕೂಡ ನನ್ನ ಜೊತೆ ಜೈಲಿಗೆ ಬರಲೇಬೇಕು.
ಪೋಲೀಸರು ದರ್ಶನ್‌ನನ್ನು ದಸ್ತಗಿರಿ ಮಾಡಿದರು. ಅದೇ ಸಮಯದಲ್ಲಿ ರಾಜಶೇಖರ್‌ನ ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿತು. ಜೈಲಿನಲ್ಲಿ ಕಥೆ ಕೇಳಿದ ಅನನ್ಯಾ ಸ್ತಬ್ಧಳಾದಳು. ದರ್ಶನ್, ನೀನು ಹ್ಯಾಕ್ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಕೋರ್ಟ್ ಹೇಳುತ್ತಿದೆಯಲ್ಲ? ದರ್ಶನ್ ಉತ್ತರಿಸಿದ ಮೇಡಂ, ಬೆಂಕಿಯನ್ನು ಆರಿಸಲು ಕೆಲವೊಮ್ಮೆ ಬೆಂಕಿಯನ್ನೇ ಬಳಸಬೇಕಾಗುತ್ತದೆ. ನಾನು ಕಾನೂನು ಮುರಿದಿರಬಹುದು, ಆದರೆ ನಾನು ಸಾಯುತ್ತಿರುವ ಸಾವಿರಾರು ಜೀವಗಳನ್ನು ಉಳಿಸಿದ್ದೇನೆ. ವಿಚಾರಣೆಯ ದಿನ, ಸಾವಿರಾರು ಜನರು ಕೋರ್ಟ್ ಮುಂದೆ ಜಮಾಯಿಸಿದ್ದರು. ದರ್ಶನ್ ನಮ್ಮ ನಾಯಕ ಎಂದು ಘೋಷಣೆ ಕೂಗುತ್ತಿದ್ದರು. ನ್ಯಾಯಾಧೀಶರು ತೀರ್ಪು ನೀಡಿದರು. ದರ್ಶನ್ ಮಾಡಿದ್ದು ಹ್ಯಾಕಿಂಗ್ ಅಪರಾಧವೇ ಆದರೂ, ಅವನು ಸಂಗ್ರಹಿಸಿದ ಸಾಕ್ಷ್ಯಗಳು ಮತ್ತು ಅವನ ಉದ್ದೇಶವು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆ. ಆದ್ದರಿಂದ ಅವನಿಗೆ ಕನಿಷ್ಠ ಶಿಕ್ಷೆ ನೀಡಲಾಗುವುದು. ಆದರೆ ರಾಜಶೇಖರ್ ಮತ್ತು ಅವನ ತಂಡಕ್ಕೆ ದೇಶದ್ರೋಹದ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ದರ್ಶನ್ ಜೈಲಿಗೆ ಹೋದರೂ, ಅವನ ಹೆಸರಿನಲ್ಲಿ ಒಂದು ದೊಡ್ಡ ಸೈಬರ್ ಮೂವ್‌ಮೆಂಟ್ ಶುರುವಾಯಿತು. ಜನರು ಅವನನ್ನು ಡಿಜಿಟಲ್ ಕ್ರಾಂತಿಕಾರಿ ಎಂದು ಕರೆದರು.
ಈ ಕಥೆಯ ಕೊನೆಯಲ್ಲಿ ಪ್ರಶ್ನೆ ಉಳಿಯುವುದು ಒಂದೇ ವ್ಯವಸ್ಥೆಯನ್ನು ಸರಿಪಡಿಸಲು ಕಾನೂನು ಮುರಿಯುವವನು ನಾಯಕನೋ ಅಥವಾ ಕಾನೂನು ಪಾಲಿಸುವ ನೆಪದಲ್ಲಿ ಅನ್ಯಾಯ ಮಾಡುವವನು ನಾಯಕನೋ?
ದರ್ಶನ್ ಕಿಟಕಿಯಿಂದ ಹೊರಗೆ ಹಾರುತ್ತಿರುವ ಹಕ್ಕಿಯನ್ನು ನೋಡುತ್ತಾ ಅಂದುಕೊಂಡ ನಾನು ನಾಯಕನೂ ಅಲ್ಲ, ಖಳನಾಯಕನೂ ಅಲ್ಲ.  ನಾನು ಕೇವಲ ನ್ಯಾಯದ ಧ್ವನಿ.
ಈ ಕಥೆ ನಿಮ್ಮ ಮನಸ್ಸಿಗೆ ತಾಗಿದ್ರೆ  ಒಂದು ಕಾಮೆಂಟ್ ಬರೆಯಿರಿ ❤️ ಏಕೆಂದರೆ  ನಿಮ್ಮ ಪ್ರತಿಕ್ರಿಯೆ ನನ್ನ ಬರವಣಿಗೆಯ ಉಸಿರು.