ಮಲೆನಾಡಿನ ತಪ್ಪಲಿನಲ್ಲಿರುವ ಧರ್ಮಪುರ ಒಂದು ಶಾಂತಿಯುತ ಗ್ರಾಮ. ಅಲ್ಲಿನ ಹಸಿರು ಕಾಡು, ತಂಪು ಗಾಳಿ ಮತ್ತು ಹರಿಯುವ ತೊರೆಗಳಷ್ಟೇ ಪವಿತ್ರವಾದದ್ದು ಅಲ್ಲಿನ ಶಂಕರನ ಡೈರಿ ಶಂಕರಣ್ಣ ಆ ಊರಿನ ಹಿರಿಯ ವ್ಯಕ್ತಿ. ಅವರು ಹಸುಗಳನ್ನು ಕೇವಲ ಪ್ರಾಣಿಗಳೆಂದು ನೋಡುತ್ತಿರಲಿಲ್ಲ. ಬದಲಾಗಿ ಅವುಗಳನ್ನು ಮನೆಯ ದೇವತೆಗಳೆಂದು ಪೂಜಿಸುತ್ತಿದ್ದರು. ಶಂಕರಣ್ಣನ ಹಾಲಿನ ಡೈರಿಯಿಂದ ಬರುವ ಹಾಲು ಅಪ್ಪಟ ಬೆಳ್ಳಗೆ, ಮಲ್ಲಿಗೆಯ ಪರಿಮಳದಂತೆ ಇರುತ್ತಿತ್ತು. ಊರಿನ ಜನರು ತಮ್ಮ ಮಕ್ಕಳಿಗೆ ಬೇರೆ ಯಾವುದನ್ನಾದರೂ ನೀಡಲು ಹೆದರುತ್ತಿದ್ದರು, ಆದರೆ ಶಂಕರಣ್ಣನ ಹಾಲನ್ನು ಕಣ್ಣು ಮುಚ್ಚಿ ಕುಡಿಸುತ್ತಿದ್ದರು. ಹಾಲಿನಲ್ಲಿ ದೇವರಿರುತ್ತಾನೆ, ಅದನ್ನು ಕಲಬೆರಕೆ ಮಾಡುವುದು ಆತ್ಮಕ್ಕೆ ವಿಷವಿಕ್ಕಿದಂತೆ ಎಂಬುದು ಅವರ ಬದುಕಿನ ಮೂಲಮಂತ್ರವಾಗಿತ್ತು. ಅವರ ಪ್ರಾಮಾಣಿಕತೆಯಿಂದಾಗಿ ಧರ್ಮಪುರದ ಹಾಲು ಸುತ್ತಮುತ್ತಲ ಹತ್ತು ಹಳ್ಳಿಗಳಲ್ಲಿ ಪ್ರಸಿದ್ಧವಾಗಿತ್ತು. ಶಂಕರಣ್ಣನ ಮಗ ಪ್ರಜ್ವಲ್, ನಗರದಲ್ಲಿ ಎಂ.ಬಿ.ಎ ಮುಗಿಸಿ ಹಿಂತಿರುಗಿದ್ದನು. ಅವನಿಗೆ ತನ್ನ ತಂದೆಯ ಸಾಂಪ್ರದಾಯಿಕ ಪದ್ಧತಿಗಳು ಮತ್ತು ಸಣ್ಣ ಪ್ರಮಾಣದ ಲಾಭ ಇಷ್ಟವಿರಲಿಲ್ಲ. ಅವನು ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದ್ದನು. ಅಪ್ಪಾ, ಜಗತ್ತು ಇವತ್ತು ಸ್ಪರ್ಧೆಯಲ್ಲಿದೆ. ನಾವು ಬರೀ ಹತ್ತು ಹಸುಗಳಿಂದ ಕೋಟ್ಯಧಿಪತಿಯಾಗಲು ಸಾಧ್ಯವಿಲ್ಲ. ನಾವು ಉತ್ಪಾದನೆಯನ್ನು ಹೆಚ್ಚಿಸಬೇಕು, ಪ್ಯಾಕೇಜಿಂಗ್ ಬದಲಿಸಬೇಕು ಮತ್ತು ದೊಡ್ಡ ನಗರಗಳಿಗೆ ಪೂರೈಕೆ ಮಾಡಬೇಕು ಎಂದು ಸದಾ ವಾದಿಸುತ್ತಿದ್ದನು.
ಶಂಕರಣ್ಣ ನಸುನಗುತ್ತಾ ಹೇಳುತ್ತಿದ್ದರು, ಮಗನೇ, ವ್ಯವಹಾರ ಎಂದರೆ ಕೇವಲ ಹಣವಲ್ಲ, ಅದು ನಂಬಿಕೆ. ಹಸು ಎಷ್ಟು ಹಾಲು ಕೊಡುತ್ತದೋ ಅಷ್ಟೇ ನಮಗೆ ಲಾಭ. ಅದಕ್ಕೆ ಕೃತಕವಾಗಿ ಏನನ್ನೂ ಮಾಡಬಾರದು. ಆದರೆ ಪ್ರಜ್ವಲ್‌ನ ಮನಸ್ಸಿನಲ್ಲಿ ಲಾಭ ಎನ್ನುವ ದೆವ್ವ ಈಗಾಗಲೇ ಮನೆಮಾಡಿತ್ತು. ಒಂದು ಚಳಿಗಾಲದ ದಿನ ಶಂಕರಣ್ಣನಿಗೆ ತೀವ್ರವಾದ ಪಾರ್ಶ್ವವಾಯು ಉಂಟಾಗಿ ಹಾಸಿಗೆ ಹಿಡಿದರು. ಇಡೀ ಡೈರಿಯ ಜವಾಬ್ದಾರಿ ಪ್ರಜ್ವಲ್ ಕೈಗೆ ಬಂದಿತು. ಇದೇ ಸಮಯದಲ್ಲಿ ಡೈರಿಯ ಕೆಲವು ಹಳೆಯ ಹಸುಗಳು ಅನಾರೋಗ್ಯಕ್ಕೆ ಒಳಗಾದವು. ಹಾಲಿನ ಉತ್ಪಾದನೆ ಕುಸಿಯಿತು. ಆದರೆ ನಗರದ ಕಂಪನಿಗಳ ಜೊತೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಪ್ರಜ್ವಲ್ ದೊಡ್ಡ ಪ್ರಮಾಣದ ಹಾಲನ್ನು ಪೂರೈಸಲೇಬೇಕಿತ್ತು. ಹಣದ ಸಮಸ್ಯೆ ಮತ್ತು ವೈಫಲ್ಯದ ಭಯ ಪ್ರಜ್ವಲ್‌ನನ್ನು ಕಾಡತೊಡಗಿತು. ಆಗಲೇ ಅವನಿಗೆ ಕೆಮಿಕಲ್ ಚಂದ್ರು ಎಂಬ ವ್ಯಕ್ತಿಯ ಭೇಟಿಯಾಯಿತು. ಚಂದ್ರು ಅವನಿಗೆ ಒಂದು ಸಲಹೆ ನೀಡಿದನು ನೋಡು ಪ್ರಜ್ವಲ್, ಹತ್ತು ಲೀಟರ್ ಹಾಲನ್ನು ಇಪ್ಪತ್ತು ಲೀಟರ್ ಮಾಡುವುದು ಒಂದು ಕಲೆ. ಸ್ವಲ್ಪ ಯೂರಿಯಾ, ಕಾಸ್ಟಿಕ್ ಸೋಡಾ ಮತ್ತು ಸಿಂಥೆಟಿಕ್ ಪೌಡರ್ ಬೆರೆಸಿದರೆ ಯಾರೂ ಪತ್ತೆ ಹಚ್ಚಲು ಸಾಧ್ಯವಿಲ್ಲ. ಬಣ್ಣ ಮತ್ತು ರುಚಿ ಹಾಗೆಯೇ ಇರುತ್ತದೆ. ಲಾಭ ಮಾತ್ರ ಡಬಲ್ ಆಗುತ್ತದೆ.
ಮೊದಮೊದಲು ಪ್ರಜ್ವಲ್‌ನ ಮನಸ್ಸು ಒಪ್ಪಲಿಲ್ಲ. ತಂದೆಯ ಸಂಸ್ಕಾರ ಅವನನ್ನು ತಡೆಯುತ್ತಿತ್ತು. ಆದರೆ ಬ್ಯಾಂಕಿನ ಸಾಲದ ನೋಟಿಸ್ ಅವನ ಕಣ್ಣಮುಂದೆ ಬಂದಾಗ, ಅವನು ತನ್ನ ಆತ್ಮಸಾಕ್ಷಿಯನ್ನು ಮೌನಗೊಳಿಸಿದನು. ಹಾಲು ಎಂಬ ಅಮೃತಕ್ಕೆ ಹಾಲಾಹಲ ಎಂಬ ವಿಷ ಬೆರೆಯಲು ಶುರುವಾಯಿತು. ಪ್ರಜ್ವಲ್ ತನ್ನ ಮನೆಯ ಹಿಂಭಾಗದ ಸಣ್ಣ ಕೋಣೆಯನ್ನು ಪ್ರಯೋಗಾಲಯ ಮಾಡಿಕೊಂಡನು. ರಾತ್ರಿ ಹೊತ್ತು ಗುಟ್ಟಾಗಿ ಆ ವಿಷಕಾರಿ ಮಿಶ್ರಣಗಳನ್ನು ತಯಾರಿಸಿ ಹಾಲಿಗೆ ಬೆರೆಸುತ್ತಿದ್ದನು. ಶಂಕರಣ್ಣ ಹಾಸಿಗೆಯ ಮೇಲೆ ಮಲಗಿದ್ದರೂ ಮಗನ ಚಟುವಟಿಕೆಗಳ ಬಗ್ಗೆ ಸಂಶಯ ಹೊಂದಿದ್ದರು. ಪ್ರಜ್ವಲ್, ಹಾಲಿನ ವಾಸನೆ ಯಾಕೋ ಮೊದಲಿನಂತಿಲ್ಲ, ಏನೋ ಬದಲಾದಂತಿದೆ ಎಂದು ಆಗಾಗ ಎಚ್ಚರಿಸುತ್ತಿದ್ದರು. ಆದರೆ ಪ್ರಜ್ವಲ್, ಅಪ್ಪಾ, ನೀನು ಹಳೆಯ ಕಾಲದವನು, ಈಗ ತಂತ್ರಜ್ಞಾನ ಬೆಳೆದಿದೆ, ಅದಕ್ಕೆ ವಾಸನೆ ಬದಲಾಗಿದೆ ಅಷ್ಟೆ ಎಂದು ಸುಳ್ಳು ಹೇಳಿ ನುಣುಚಿಕೊಳ್ಳುತ್ತಿದ್ದನು. ಲಾಭ ಹೆಚ್ಚಾಯಿತು. ಪ್ರಜ್ವಲ್ ಹೊಸ ಕಾರು ಖರೀದಿಸಿದನು, ಮನೆಯನ್ನು ನವೀಕರಿಸಿದನು. ಊರಿನ ಜನರು ಅವನನ್ನು ನೋಡಿ ಶಂಕರಣ್ಣನ ಮಗ ತಂದೆಯ ಹೆಸರನ್ನು ಉಳಿಸುತ್ತಿದ್ದಾನೆ ಎಂದು ಕೊಂಡಾಡುತ್ತಿದ್ದರು. ಆದರೆ ಅವರಿಗೆ ಗೊತ್ತಿರಲಿಲ್ಲ, ಅವರು ಕುಡಿಯುತ್ತಿದ್ದ ಪ್ರತಿಯೊಂದು ಹನಿ ಹಾಲಿನಲ್ಲೂ ಸಾವಿನ ಸಂಕೇತವಿತ್ತು ಎಂದು. ಧರ್ಮಪುರದಲ್ಲಿ ಪ್ರತಿ ವರ್ಷ ದೊಡ್ಡ ಗ್ರಾಮ ದೇವತೆಯ ಜಾತ್ರೆ ನಡೆಯುತ್ತಿತ್ತು. ಅಂದು ಇಡೀ ಊರಿನ ಜನರಿಗೆ ಹಾಲು ಪಾಯಸದ ಪ್ರಸಾದವನ್ನು ಹಂಚುವ ಜವಾಬ್ದಾರಿ ಶಂಕರಣ್ಣನ ಡೈರಿಯದ್ದಾಗಿತ್ತು. ಪ್ರಜ್ವಲ್ ಅಂದು ಅತೀ ಹೆಚ್ಚು ಲಾಭ ಮಾಡಲು ನಿರ್ಧರಿಸಿ, ಹಾಲಿನ ಪ್ರಮಾಣವನ್ನು ಹೆಚ್ಚಿಸಲು ಅತಿಯಾದ ರಾಸಾಯನಿಕಗಳನ್ನು ಬಳಸಿದನು. ಜಾತ್ರೆಯ ಸಂಭ್ರಮ ಮುಗಿದು ಜನರೆಲ್ಲ ಮನೆಗೆ ಮರಳಿದರು. ಆದರೆ ಮಧ್ಯರಾತ್ರಿಯಿಂದಲೇ ಊರಿನಲ್ಲಿ ಹಾಹಾಕಾರ ಶುರುವಾಯಿತು. ಹತ್ತಾರು ಮಕ್ಕಳು, ವೃದ್ಧರು ತೀವ್ರವಾದ ವಾಂತಿ, ಹೊಟ್ಟೆನೋವಿನಿಂದ ನರಳುತ್ತಾ ಆಸ್ಪತ್ರೆಗೆ ದಾಖಲಾದರು. ಇಡೀ ಊರೇ ಆಸ್ಪತ್ರೆಯ ಮುಂದೆ ಜಮಾಯಿಸಿತು. ವೈದ್ಯರು ಪರೀಕ್ಷಿಸಿ ಆಘಾತಕಾರಿ ಸುದ್ದಿ ನೀಡಿದರು. ಇದು ಕೇವಲ ಆಹಾರ ವಿಷಪೂರಿತವಾದದ್ದಲ್ಲ ಇದು ಹಾಲಿನಲ್ಲಿರುವ ರಾಸಾಯನಿಕಗಳಿಂದ ಉಂಟಾದ ತೀವ್ರ ಪ್ರಮಾಣದ ಸೋಂಕು.ಆಸ್ಪತ್ರೆಯ ಒಂದು ಬೆಡ್ ಮೇಲೆ ಪ್ರಜ್ವಲ್‌ನ ಪ್ರೀತಿಯ ತಂಗಿ, ಪುಟ್ಟ ಮಗು ಸನ್ನಿಧಿ ಕೂಡ ಪ್ರಜ್ಞೆ ತಪ್ಪಿ ಮಲಗಿದ್ದಳು. ಅವಳು ಅಂದು ಅಣ್ಣ ತಂದಿದ್ದ ಹಾಲನ್ನು ಅತೀ ಹೆಚ್ಚಾಗಿ ಕುಡಿದಿದ್ದಳು. ಪ್ರಜ್ವಲ್‌ನ ಎದೆಯಲ್ಲಿ ಮಿಂಚು ಹೊಡೆದಂತಾಯಿತು. ತಾನು ಯಾರಿಗೋ ಮಾರಲು ಸಿದ್ಧಪಡಿಸಿದ ವಿಷ, ಇಂದು ತನ್ನ ಪ್ರೀತಿಯ ತಂಗಿಯ ಪ್ರಾಣವನ್ನೇ ಹಿಂಡುತ್ತಿದೆ ಎಂದು ತಿಳಿದಾಗ ಅವನ ಕಾಲುಗಳು ನಡುಗತೊಡಗಿದವು.
ವಿಷಯ ತಿಳಿದ ಶಂಕರಣ್ಣ, ನಡುಗುವ ಕಾಲಲ್ಲೇ ಆಸ್ಪತ್ರೆಗೆ ಬಂದರು. ಅವರು ವೈದ್ಯರ ವರದಿಯನ್ನು ನೋಡಿದಾಗ ಸತ್ಯ ಏನೆಂದು ಅವರಿಗೆ ತಕ್ಷಣ ಅರ್ಥವಾಯಿತು. ಅವರು ಮಗನ ಹತ್ತಿರ ಹೋಗಿ ಅವನ ಕೆನ್ನೆಗೆ ಬಲವಾಗಿ ಹೊಡೆದರು. ಆ ಒಂದು ಏಟು ಪ್ರಜ್ವಲ್‌ನ ಇಡೀ ಅಹಂಕಾರವನ್ನು ಅಳಿಸಿಹಾಕಿತು. ಹಣಕ್ಕಾಗಿ ಈ ಲೋಕಕ್ಕೆ ವಿಷ ಉಣಿಸಿದೆಯಾ? ನಿನ್ನ ಸ್ವಂತ ತಂಗಿಯ ಪ್ರಾಣದ ಜೊತೆ ಆಟವಾಡಿದೆಯಾ? ಮಗನೇ, ಶಿವನು ಹಾಲಾಹಲವನ್ನು ಕುಡಿದು ಜಗತ್ತನ್ನು ಉಳಿಸಿದ. ಆದರೆ ನೀನು ಹಾಲನ್ನೇ ಹಾಲಾಹಲ ಮಾಡಿ ಜಗತ್ತನ್ನೇ ನಾಶ ಮಾಡಲು ಹೊರಟಿದೆಯಾ? ಎಂದು ಶಂಕರಣ್ಣ ಗರ್ಜಿಸಿದರು.
ಅಂದು ಪ್ರಜ್ವಲ್ ತನ್ನ ತಂದೆಯ ಮುಂದೆ ತಲೆತಗ್ಗಿಸಿ ನಿಂತನು. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ಅವನು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ತಾನು ಮಾಡಿದ ಎಲ್ಲ ಅಪರಾಧಗಳನ್ನು ಒಪ್ಪಿಕೊಂಡನು. ತನ್ನ ಗೋದಾಮಿನಲ್ಲಿದ್ದ ಎಲ್ಲ ರಾಸಾಯನಿಕಗಳನ್ನು ಪೊಲೀಸರಿಗೆ ಒಪ್ಪಿಸಿದನು.
ಅದೃಷ್ಟವಶಾತ್ ವೈದ್ಯರ ಸತತ ಪ್ರಯತ್ನದಿಂದ ಸನ್ನಿಧಿ ಮತ್ತು ಊರಿನ ಮಕ್ಕಳು ಬದುಕುಳಿದರು. ಆದರೆ ಶಂಕರಣ್ಣ ಕಟ್ಟಿದ್ದ ಆ 'ನಂಬಿಕೆಯ ಸಾಮ್ರಾಜ್ಯ' ಧೂಳೀಪಟವಾಗಿತ್ತು. ಪ್ರಜ್ವಲ್ ಜೈಲಿಗೆ ಹೋದನು. ಶಂಕರಣ್ಣ ತನ್ನ ಆಸ್ತಿಯನ್ನೆಲ್ಲಾ ಮಾರಿ ಊರಿನ ಜನರ ಚಿಕಿತ್ಸೆಗೆ ವೆಚ್ಚ ಮಾಡಿದರು. ಅವರು ಮತ್ತೆ ಏಕಾಂಗಿಯಾದರು, ಆದರೆ ಅವರ ಪ್ರಾಮಾಣಿಕತೆ ಮಾತ್ರ ಈಗಲೂ ಅಜರಾಮರವಾಗಿತ್ತು.ಕೆಲವು ವರ್ಷಗಳ ನಂತರ ಪ್ರಜ್ವಲ್ ಜೈಲಿನಿಂದ ಬಿಡುಗಡೆಯಾಗಿ ಬಂದಾಗ, ಅವನು ಸಂಪೂರ್ಣ ಬದಲಾಗಿದ್ದನು. ಅವನು ತನ್ನ ತಂದೆಯ ಪಾದ ಮುಟ್ಟಿ ನಮಸ್ಕರಿಸಿದನು. ಈಗ ಅವನು ಮತ್ತೆ ಡೈರಿ ಶುರು ಮಾಡಿದನು, ಆದರೆ ಈ ಬಾರಿ ಅಲ್ಲಿ ಪ್ರತಿಯೊಂದು ಹನಿ ಹಾಲೂ ಕೂಡ ತಂದೆಯ ತತ್ವದಂತೆ ಪವಿತ್ರವಾಗಿತ್ತು.
ಪ್ರಕೃತಿ ನೀಡುವ ಅಮೃತದಂತಹ ವಸ್ತುಗಳನ್ನು ಮನುಷ್ಯ ತನ್ನ ದುರಾಸೆಯಿಂದ ಹಾಲಾಹಲವಾಗಿ ಮಾರ್ಪಡಿಸಿದರೆ, ಅದರ ಬೆಲೆಯನ್ನು ಅವನೇ ತೆರಬೇಕಾಗುತ್ತದೆ. ವ್ಯವಹಾರದಲ್ಲಿ ಲಾಭವಿರಬೇಕು ನಿಜ, ಆದರೆ ಆ ಲಾಭಕ್ಕೆ ಇನ್ನೊಬ್ಬರ ಪ್ರಾಣದ ಬೆಲೆ ಇರಬಾರದು. ನಂಬಿಕೆ ಎನ್ನುವುದು ಒಡೆದ ಕನ್ನಡಡಿಯಂತೆ ಅದನ್ನು ಮತ್ತೆ ಅಂಟಿಸಬಹುದು, ಆದರೆ ಬಿರುಕು ಮಾತ್ರ ಹಾಗೆಯೇ ಉಳಿಯುತ್ತದೆ.