The language of plants: the origin of eco-friendly solutions in Kannada Spiritual Stories by prashanth books and stories PDF | ಗಿಡದ ನುಡಿ: ಪರಿಸರ ಸಿದ್ಧರ ಉಗಮ

Featured Books
Categories
Share

ಗಿಡದ ನುಡಿ: ಪರಿಸರ ಸಿದ್ಧರ ಉಗಮ

ಮಲೆನಾಡಿನ ಮುಂಜಾನೆ ಎಂದೂ ವಿಶೇಷವಾದುದು. ಮಂಜಿನ ಪರದೆಯ ಮೂಲಕ ಮೊದಲ ಬೆಳಕಿನ ಕಿರಣಗಳು ಭೇದಿಸುವಾಗ, ಜಗತ್ತು ಒಂದು ಮಾಂತ್ರಿಕ ಕನಸಿನಂತಾಗುತ್ತದೆ. ಆದರೆ ಅರ್ಜುನನಿಗೆ, ಅದು ಮತ್ತೊಂದು ಲೋಕವೇ ಆಗಿತ್ತು.
ಗಡಿಯಾರ ಆರು ಗಂಟೆ ಬಾರಿಸುವಾಗಲೇ ಅವನ ಕಣ್ಣು ತೆರೆಯಿತು ಎಚ್ಚರವಾದನು, ಇನ್ನು ನಿದ್ದೆಗಣ್ಣು, ಮೈಮುರಿಯುತ್ತ ಎದ್ದನು, ಕಿಟಕಿಯ ಬಳಿಗೆ ಹೋಗಿ ಪರದೆ ಎಳೆದನು. ಹೊರಗೆ ಮುಸುಕು ಮಂಜು ಇನ್ನೂ ದಟ್ಟವಾಗಿ ಹರಡಿತ್ತು, ಆದರೆ ಅವನ ಕಣ್ಣುಗಳಿಗೆ ಮಾತ್ರ - ಆ ಸಾಮಾನ್ಯ ಮಂಜಿನ ಮುಸುಕಿನಲ್ಲಿ ಮತ್ತೊಂದು ವಿಶ್ವವೆ ತೇಲಾಡುತ್ತಿತ್ತು. ಚಿನ್ನದ ಬಣ್ಣದ್ದು. ಜೀವಂತವಾದುದು. ಸಸ್ಯಗಳ ಸುತ್ತ ಸುತ್ತುವರೆದಿತ್ತು, ವಿವಿಧ ಬಣ್ಣಗಳ, ಹೊಳೆಯುವ ಪ್ರಭಾವಳಿ...
"ಅರ್ಜುನಾ! ಎದ್ದೇಳೋ! ಎಷ್ಟು ಹೊತ್ತು ಮಲ್ಕೊತಿಯೋ, ಶಾಲೆಗೆ ತಡ ಆಯಿತು?" ಅಮ್ಮನ ಕರೆ ಕೇಳಿಸಿತು.
"ಬರ್ತೀನಿ ಅಮ್ಮಾ!" 
ತನ್ನ ಸಣ್ಣ ಕೋಣೆಯಲ್ಲಿ ಸುತ್ತಲೂ ನೋಡಿದನು. ಗೋಡೆಯ ಮೇಲೆ ಅವನ ಚಿತ್ರಗಳು - ಶಾಲೆಯ ಸ್ಪರ್ಧೆಯ ಪ್ರಶಸ್ತಿಗಳು, ಜಿಲ್ಲಾ ಮಟ್ಟದ ಕಲಾ ಪ್ರದರ್ಶನದ ಪ್ರಮಾಣಪತ್ರಗಳು. ಕೆಲವು ಚಿತ್ರಗಳನ್ನು ಅಂಟಿಸಿದ್ದನು - ಒಂದರಲ್ಲಿ ಜಲಪಾತ, ಇನ್ನೊಂದರಲ್ಲಿ ಮಳೆಗಾಲದ ಹಸಿರು ಕಾಡು. ಆದರೆ ಮನೆಯಲ್ಲಿ ಯಾರೂ ಅವುಗಳನ್ನು ಪ್ರಸ್ತಾಪಿಸುತ್ತಿರಲಿಲ್ಲ. ಎಲ್ಲರ ಚಿಂತೆ ಒಂದೇ - "ಗಣಿತದಲ್ಲಿ ಹೇಗೆ ಉತ್ತೀರ್ಣನಾಗುವುದು?"
ಸ್ನಾನ ಮುಗಿಸಿ, ಶಾಲಾ ಸಮವಸ್ತ್ರ ತೊಟ್ಟು, ಚೀಲ ಹೊತ್ತುಕೊಂಡನು. ಆದರೆ ಅವನ ಚೀಲದಲ್ಲಿ ಪಠ್ಯ ಪುಸ್ತಕಗಳ ಜೊತೆಗೆ ಇನ್ನೊಂದು ವಸ್ತು ಯಾವಾಗಲೂ ಇರುತಿತ್ತು - ಅವನ ಸಣ್ಣ ಚಿತ್ರಕಲಾ ಪುಸ್ತಕ ಮತ್ತು ಬಣ್ಣದ ಪೆನ್ಸಿಲುಗಳ ಡಬ್ಬಿ.
ಮನೆಯ ಹೊರಗೆ ಕಾಲಿಟ್ಟ ಕ್ಷಣ, ಲೋಕವೇ ರೂಪಾಂತರಗೊಂಡಿತು.
ಅಂಗಳದ ತುಳಸಿ ಕಟ್ಟೆಯ ಸುತ್ತ ಚಿನ್ನದ ಪ್ರಭಾವಳಿ ನಿಧಾನವಾಗಿ ಸುಳಿಯುತ್ತಿತ್ತು, ಬೆಳಕಿನ ದಾರಗಳಂತೆ. ಬಾಗಿಲ ಬಳಿಯ ಅರಳೆ ಗಿಡ, ಬಾವಿಯ ಹತ್ತಿರದ ಹೊನ್ನೆ ಮರ, ಬೇಲಿಯ ಪಕ್ಕದ ದೊಡ್ಡ ಆಲದ ಮರ - ಪ್ರತಿಯೊಂದೂ ತನ್ನದೇ ಆದ ಸ್ವರ್ಣಾ ಪ್ರಭಾವಲಯದಲ್ಲಿ ಮುಳುಗಿತ್ತು. ಅರ್ಜುನನಿಗೆ ಮಾತ್ರ ಕಾಣುವ ಈ ಅದ್ಭುತ ದೃಶ್ಯ.

"ಅರ್ಜೂನಾ! ಇಂದು ಕೂಡ ಕನಸು ಕಾಣ್ತಿದ್ಯಾ ನೋಡು? ಬಾ ಬೇಗ, ಇಲ್ಲಾ ಶರ್ಮಾ ಸರ್ ಬಯ್ತಾರೆ"
ಅವನ ಬಾಲ್ಯಸ್ನೇಹಿತ ಕಿರಣ್ ಪಕ್ಕದ ಮನೆಯಿಂದ ಕೂಗಿದನು. ಕಿರಣ್ - ಯಾವಾಗಲೂ ಪ್ರಾಯೋಗಿಕ, ಯಾವಾಗಲೂ ಸಮಯಕ್ಕೆ ಚುರುಕು, ಯಾವಾಗಲೂ ನೆಲಮಟ್ಟದಲ್ಲಿ, ವ್ಯವಹಾರಿಕವಾಗಿ ಚಿಂತಿಸುವವನು. ಅವರಿಬ್ಬರೂ ವಿರುದ್ಧ ಧ್ರುವಗಳಂತೆ. ಆದರೂ ಬಾಲ್ಯದಿಂದಲೂ  ಸ್ನೇಹಿತರು.

"ಬರ್ತೀನಿ ಬರ್ತೀನಿ!" ಅರ್ಜುನ ತನ್ನ ಚಿತ್ರಕಲಾ ಪುಸ್ತಕ ತೆಗೆದು, ಆ ತುಳಸಿ ಕಟ್ಟೆಯ ತ್ವರಿತ ರೇಖಾಚಿತ್ರ ಮಾಡಿದನು - ಚಿನ್ನದ ಬೆಳಕಿನ, ವಿವಿಧ ಬಣ್ಣಗಳ ಸುಳಿಯಲ್ಲಿ ಮುಳುಗಿದಂತೆ. ಕೆಲವೇ ಗೆರೆಗಳಲ್ಲಿ ಆ ದೃಶ್ಯ ಜೀವಂತವಾಯಿತು.



ಶಾಲೆಗೆ ಹೋಗುವ ದಾರಿ ಮಲೆನಾಡಿನ ಸೌಂದರ್ಯದ ಜೀವಂತ ಪ್ರದರ್ಶನವಾಗಿತ್ತು. ಎರಡು ಕಡೆಯೂ ದಟ್ಟ ಹಸಿರು -ಕಾಡು ಹೂಗಿಡಗಳು. ದೂರದಲ್ಲಿ ಜಲಪಾತದ ಸತತ ಸದ್ದು, ಹಕ್ಕಿಗಳ ಕಲರವ, ತರಗೆಲೆಗಳ ಸದ್ದು. ಇತರ ಮಕ್ಕಳಿಗೆ ಇದು ಕೇವಲ ದೈನಂದಿನ ಮಾರ್ಗ. ಅರ್ಜುನನಿಗೆ, ಇದು ಪ್ರತಿದಿನ ಬದಲಾಗುವ ವಿವಿಧ ತೇಲುವ ಬಣ್ಣಗಳ ರಾಶಿಯಾಗಿದ್ದವು.
"ಅಯ್ಯೋ, ನೋಡು ಕಿರಣ್! ಈ  ಎಲೆಯ ಮೇಲೆ ಇಬ್ಬನಿಯ ಹನಿಗಳು ಹೇಗೆ ಮುತ್ತಿನಂತೆ ಕಾಣುತ್ತಿವೆ ಅಂತ..." ಅರ್ಜುನ ನಿಲ್ಲಿಸಿದನು, ಆ ದೃಶ್ಯದಲ್ಲಿ ಮುಳುಗಿದನು. ಅವನಿಗೆ ಮಾತ್ರ, ಆ ಇಬ್ಬನಿ ಹನಿಗಳ ಸುತ್ತ ಬಣ್ಣದ ಪ್ರಭೆ ಕಾಣುತ್ತಿತ್ತು.
"ಹೌದಪ್ಪಾ, ಚೆನ್ನಾಗಿದೆ. ಆದ್ರೆ ಇವತ್ತು ಗಣಿತದ ತರಗತಿ ಇದೆ ನೆನಪಿದ್ಯಾ? ತಡವಾದ್ರೆ ಶರ್ಮಾ ಸರ್ ತರಗತಿಯ ಹೊರಗೆ ನಿಲ್ಲಿಸಿ ಬಿಡ್ತಾರೆ," ಕಿರಣ್ ಅವನ ಕೈ ಹಿಡಿದು ಎಳೆದನು.
ನಡೆಯುತ್ತಾ ನಡೆಯುತ್ತಾ ಅರ್ಜುನ ಮತ್ತೆ ತನ್ನ ಪುಸ್ತಕ ತೆಗೆದು ಏನೋ ಗೀಚುತ್ತಾ ಹೋದನು. ಒಂದು ಕಲ್ಲಿಗೆ ಎಡವಿ ಬೀಳುತ್ತಿದ್ದನು. ಕಿರಣ್ ಹಿಡಿದು ನಿಲ್ಲಿಸಿದನು.
"ಎಷ್ಟು ಸಲ ಹೇಳಲಿ? ನಡೆಯುತ್ತಾ ಚಿತ್ರ ಬರೆಯಬೇಡ ಅಂತ! ಬೀಳ್ತೀಯ ಒಂದು ದಿನ!" ಆದರೆ ಅವನ ಧ್ವನಿಯಲ್ಲಿ ಕೋಪಕ್ಕಿಂತ ಕಾಳಜಿಯೇ ಹೆಚ್ಚಿತ್ತು
ಅವರು ಹಾದು ಹೋಗುವಾಗ, ದಾರಿಯ ಬದಿಯಲ್ಲಿ ಒಂದು ದೊಡ್ಡ  ಬಂಡೆ ಇತ್ತು - ಅವರ ಬಾಲ್ಯದ ಆಟದ ಸ್ಥಳ. ಮೇಲ್ಮೈ ಎಷ್ಟು ನಯವಾಗಿತ್ತೆಂದರೆ,  ಅದು ಪರಿಪೂರ್ಣ ಜಾರುಬಂಡೆಯಂತಿತ್ತು.
"ನೆನಪಿದ್ಯಾ? ಈ ಜಾರು ಬಂಡೆ ಮೇಲೆ ನಾವು ಎಷ್ಟು ಜಾರಾಟ ಆಡಿದ್ದೇವೋ? ಮತ್ತೆ ನೀನು ಯಾವಾಗಲೂ ಮೊದಲು ಜಾರಬೇಕು ಅಂತ ತುಸು ಜಗಳ ಮಾಡ್ತಿದ್ದೆ," ಕಿರಣ್ ನಗುತ್ತಾ ಹೇಳಿದನು.
"ಹಾಂ, ಮತ್ತೆ ಒಂದು ದಿನ ನೀನು ತುಂಬಾ ಜೋರಾಗಿ ಜಾರಿದ್ದು, ನೇರ ಆ ಕೆಳಗಿನ ಹಳ್ಳದಲ್ಲಿ ಬೀಳ್ತಿದ್ದೆ. ನಾನು ಹಿಡಿದಿಲ್ಲಾಂದ್ರೆ!" ಅರ್ಜುನ ನಕ್ಕನು.
"ಅದೇನೂ! ನೀನೇ ತಳ್ಳಿದ್ದು ಮೊದಲು!" ಕಿರಣ್ ಅವನ ಹೆಗಲನ್ನು ತಟ್ಟಿ ಹೇಳಿದನು.

ಆ ಸಣ್ಣ ಕ್ಷಣ - ಆ ನಗು, ಆ ನೆನಪು, ಆ ಸ್ನೇಹದ ಬೆಚ್ಚಗಿನ ಅನುಭವ. 

ಶಾಲೆಯಲ್ಲಿ ಗಣಿತದ ತರಗತಿ - ಅರ್ಜುನನಿಗೆ ವಾರಕ್ಕೆ ಐದು ದಿನ ಪುನರಾವರ್ತನೆಯಾಗುವ ದುಃಸ್ವಪ್ನ.

"ಈ ಸಮೀಕರಣವನ್ನು ಪರಿಹರಿಸಲು ನಾವು ಮೊದಲು ಎರಡೂ ಕಡೆಯ ಸಾಮಾನ್ಯ ಅಂಶವನ್ನು ತೆಗೆಯಬೇಕು..." ಶರ್ಮಾ ಸರ್ ಕಪ್ಪು ಹಲಗೆಯ ಮೇಲೆ ಬಿಳಿ ಸೀಮೆಸುಣ್ಣದಿಂದ ಬರೆಯುತ್ತಾ ವಿವರಿಸುತ್ತಿದ್ದರು. ಅವರ ಧ್ವನಿ ಏಕತಾನ, ನಿದ್ರಾಜನಕ.
ಅರ್ಜುನ ತನ್ನ ಪುಸ್ತಕದತ್ತ ನೋಡಿದನು. ಪುಟಗಳು ಸಂಖ್ಯೆಗಳಿಂದ ಮತ್ತು ಸಮೀಕರಣಗಳಿಂದ ತುಂಬಿರಬೇಕಿತ್ತು. ಆದರೆ ಅವು ಚಿತ್ರಗಳಿಂದ ತುಂಬಿದ್ದವು - ಅಂಚುಗಳಲ್ಲಿ ಎಲೆಗಳು, ಹೂವುಗಳು, ಚಿಟ್ಟೆಗಳು, ವಿವರವಾದ ರೇಖಾಚಿತ್ರಗಳು. ಒಂದು ಪುಟದ ಮೂಲೆಯಲ್ಲಿ ಆ ಜಾರು ಬಂಡೆಯ ಸ್ಕೆಚ್, ಇನ್ನೊಂದರಲ್ಲಿ ದಾರಿಯ ಪಕ್ಕದ ಹೂವುಗಳು.

"ಅರ್ಜುನ್!"

ಶರ್ಮಾ ಸರ್‌ನ ಧ್ವನಿ ತರಗತಿಯಲ್ಲಿ ಪ್ರತಿಧ್ವನಿಸಿತು. ಎಲ್ಲರೂ ಅವನತ್ತ ತಿರುಗಿದರು. ಕೆಲವರು ಕುತೂಹಲದಿಂದ, ಕೆಲವರು ಸಹಾನುಭೂತಿಯಿಂದ.

"ಇದು ಗಣಿತದ ತರಗತಿ, ಚಿತ್ರಕಲೆ ತರಗತಿ ಅಲ್ಲ! ನೋಡಿ, ಇಡೀ ಪುಟ ಚಿತ್ರಗಳಿಂದ ತುಂಬಿದೆ. ಈ ಚಿತ್ರಗಳಿಂದ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗುವೆಯೇ? ನಿನ್ನ ಭವಿಷ್ಯದ ಬಗ್ಗೆ ಯೋಚನೆ ಇಲ್ಲವೇನು?"

ತರಗತಿಯಲ್ಲಿ ಸಣ್ಣ ನಗೆಯ ಅಲೆ. ಅರ್ಜುನ ತಲೆ ತಗ್ಗಿಸಿದನು, ಮುಖ ಕೆಂಪಾಯಿತು. ಕಿವಿಗಳು ಬಿಸಿಯಾದವು.

ಕಿರಣ್ ಪಕ್ಕದಿಂದ ಸಹಾನುಭೂತಿಯಿಂದ ನೋಡಿದನು, ಶರ್ಮಾ ಸರ್ ತಿರುಗಿ ಹಲಗೆಯತ್ತ ಹೋದಾಗ, ಅವನು ಪಿಸುಗುಟ್ಟಿದನು: "ಬಿಡು, ಆಗ್ತಾ ಇರ್ತೆ."

ಮಧ್ಯಾಹ್ನದ ವಿರಾಮದಲ್ಲಿ, ಅವರಿಬ್ಬರೂ ಶಾಲೆಯ ಹಳೆಯ ಮಾವಿನ ಮರದ ಕೆಳಗೆ ಕುಳಿತರು. ಅರ್ಜುನ ತನ್ನ ಹೊಸ ಚಿತ್ರ ತೋರಿಸಿದನು - ಬೆಳಗಿನ ದಾರಿಯಲ್ಲಿ ಕಂಡ ದೃಶ್ಯ, ಆದರೆ ಅದರಲ್ಲಿ ಏನೋ ವಿಶೇಷ - ಸಸ್ಯಗಳ ಸುತ್ತ ಚಿನ್ನದ ಬೆಳಕಿನ ಸೂಕ್ಷ್ಮ ಸೂಚನೆ, ಸೂರ್ಯನ ಕಿರಣಗಳಂತೆ ಆದರೆ ಬೇರೆ ರೀತಿಯದು.

"ವಾಹ್, ತುಂಬಾ ಚೆನ್ನಾಗಿದೆ," ಕಿರಣ್ ಪ್ರಶಂಸಿಸಿದನು. "ಆದ್ರೆ... ಸ್ವಲ್ಪ ಓದುವುದಕ್ಕೂ ಸಮಯ ಕೊಡು, ಅರ್ಜುನ. ನಿನಗೆ ಪ್ರತಿಭೆ ಇದೆ, ಅದು ನನಗೆ ಗೊತ್ತು. ಆದ್ರೆ ಪರೀಕ್ಷೆಯೂ ಮುಖ್ಯ ಅಲ್ವಾ? ನೀನು ಫೇಲ್ ಆದ್ರೆ ನನಗೆ ಏನು ಅನ್ನಿಸುತ್ತೆ?"

ಆಗಲೇ ಕಲಾ ಶಿಕ್ಷಕರಾದ ವೈದೇಹಿ ಮೇಡಂ ಆ ಕಡೆ ಬಂದರು. ಅವರು ಯಾವಾಗಲೂ ಶಾಲೆಯಲ್ಲಿ ಅರ್ಜುನನ ಏಕೈಕ ಬೆಂಬಲಿಗರಾಗಿದ್ದರು.

"ಏನು, ಇನ್ನೊಂದು ಚಿತ್ರ ಬಿಡಿಸಿದ್ದೀಯ?" ಅವರು ಚಿತ್ರ ನೋಡಿದರು, ಕನ್ನಡಕದ ಮೂಲಕ ಹತ್ತಿರದಿಂದ ಪರೀಕ್ಷಿಸಿದರು. "ಅರ್ಜುನ್, ಚೆನ್ನಾಗಿದೆ, ಈ ಬೆಳಕಿನ ಬಳಕೆ... ನೀನು ತುಂಬಾ ಅಪರೂಪದ ಪ್ರತಿಭೆ. ನೀನು ಯಾವ ಬಣ್ಣಗಳನ್ನೂ ಉಪಯೋಗಿಸದೆ ಕೇವಲ ರೇಖೆಗಳಿಂದಲೇ ಪ್ರಭೇ  ಭಾಸವಾಗುವಂತೆ ಮಾಡ್ದಿದೀಯ, ಇದು ಅಸಾಧಾರಣ."

ಅರ್ಜುನ ಸ್ವಲ್ಪ ನಗುನಗುತ್ತ, ಸ್ವಲ್ಪ ಗೊಂದಲದಿಂದ ನೋಡಿದನು. ಪ್ರಶಂಸೆ ಇತ್ತು, ಆದರೆ ಅದು ಎಲ್ಲರಿಗೂ ಅರ್ಥಹೀನವೆನಿಸುತ್ತಿತ್ತು. "ಬೋರ್ಡ್ ಪರೀಕ್ಷೆಗೆ ಇದರಿಂದ ಏನು ಪ್ರಯೋಜನ?" - ಇದು ಎಲ್ಲರ ಮೌನ ಪ್ರಶ್ನೆ.
ಸಂಜೆ ಮನೆಗೆ ಬಂದಾಗ, ಅಮ್ಮ ಅಡುಗೆ ಮಾಡುತ್ತಿದ್ದರು. ಅಡುಗೆ ಮನೆಯಿಂದ ಸಂಬಾರ್ ಮತ್ತು ಹುಳಿ ಹುಣಸೆ ಗೊಜ್ಜಿನ ಸುವಾಸನೆ ಬರುತ್ತಿತ್ತು.
"ಶಾಲೆ ಹೇಗಿತ್ತು? ಗಣಿತದಲ್ಲಿ ಸ್ವಲ್ಪ ಸುಧಾರಣೆ ಆಯಿತೇ?" ಮೊದಲ ಪ್ರಶ್ನೆ.
"ಹಾಂ, ಅಮ್ಮಾ," ಅರ್ಜುನ ಅಸ್ಪಷ್ಟವಾಗಿ ಉತ್ತರಿಸಿದನು, ತನ್ನ ಚೀಲ ಕೋಣೆಯಲ್ಲಿ ಇಡಲು ಹೋದನು.
ಸಂಜೆ ಅಪ್ಪ ಕೆಲಸದಿಂದ ಮನೆಗೆ ಬಂದಾಗ, ಅವರೂ ಅದೇ ವಿಷಯ. ಅವರು ಸರಕಾರಿ ಕಚೇರಿಯಲ್ಲಿ ಲೆಕ್ಕಪತ್ರ ನೋಡುವವರು - ಸಂಖ್ಯೆಗಳ ಮನುಷ್ಯ, ವಾಸ್ತವದ ಮನುಷ್ಯ.

"ಮಗನೇ, ಚಿತ್ರಕಲೆ ಚೆನ್ನಾಗಿದೆ. ನಿನಗೆ ಪ್ರತಿಭೆ ಇದೆ, ಅದು ನಮಗೆ ಗೊತ್ತು." ಅವರು ಅವನ ಹೆಗಲಿಗೆ ಮೆಲ್ಲಗೆ ಕೈ ಇಟ್ಟರು. "ಆದರೆ ಈ ಜಗತ್ತು ಕಠಿಣ. ಭವಿಷ್ಯಕ್ಕೆ ಪ್ರಾಯೋಗಿಕ ಕೌಶಲ್ಯಗಳೂ ಬೇಕು. ಉತ್ತಮ ಕೆಲಸ, ಸ್ಥಿರ ಆದಾಯ - ಇದೆಲ್ಲವೂ ಓದಿನಿಂದಲೇ ಬರುತ್ತದೆ. ಚಿತ್ರಕಲೆ, ಅದು ಹವ್ಯಾಸವಾಗಿರಬೇಕು, ವೃತ್ತಿಯಾಗಬಾರದು."
ಅವರ ಧ್ವನಿಯಲ್ಲಿ ಪ್ರೀತಿ ಇತ್ತು, ಕಾಳಜಿ ಇತ್ತು. ಆದರೆ ಅರ್ಜುನನಿಗೆ ಆ ಮಾತುಗಳು ಕಲ್ಲುಗಳಂತೆ ಭಾರವಾಗಿ ಬಸವಯಿತು.

ರಾತ್ರಿ ತನ್ನ ಕೋಣೆಯಲ್ಲಿ, ಅವನು ತನ್ನ ಗೋಡೆಯ ಮೇಲಿನ ಪ್ರಶಸ್ತಿಗಳತ್ತ ನೋಡಿದನು. "ಮೊದಲ ಬಹುಮಾನ - ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ." "ಅತ್ಯುತ್ತಮ ಕಲಾವಿದ - ತಾಲೂಕು ಯುವ ಮಹೋತ್ಸವ." ಎಷ್ಟೋ ಪ್ರಶಸ್ತಿಗಳು, ಆದರೆ ಯಾರಿಗೂ ಅವು ಅರ್ಥವಾಗಲಿಲ್ಲ.

ಕಿಟಕಿಯ ಬಳಿಗೆ ಹೋದನು. ಹೊರಗೆ ಚಂದ್ರನ ಬೆಳಕಿನಲ್ಲಿ ಅಂಗಳದ ಸಸ್ಯಗಳು ರಾತ್ರಿಯ ಮೌನದಲ್ಲಿ ನಿಂತಿದ್ದವು. ಮತ್ತು ಅವನಿಗೆ ಮಾತ್ರ - ಆವು ವಿವಿಧ ಬಣ್ಣಗಳ ಪ್ರಭೆಯಿಂದ  ತೇಲಾಡುತ್ತಿತ್ತು, ರಾತ್ರಿಯಲ್ಲೂ ಕೂಡ.

"ನಾನೇಕೆ ಈ ರೀತಿ ನೋಡುತ್ತೇನೆ?" ಅವನು ಮನಸ್ಸಿನಲ್ಲಿ ಆಲೋಚಿಸಿದನು. "ಇದೇನು? ಕೇವಲ ನನ್ನ ಕಲ್ಪನೆಯೇ? ಅಥವಾ ನಿಜವಾಗಿಯೂ ಏನೋ ಇದೆಯೇ? ಇತರರಿಗೆ ಯಾಕೆ ಕಾಣುವುದಿಲ್ಲ?"

ಉತ್ತರಗಳಿಲ್ಲದ ಪ್ರಶ್ನೆಗಳೊಂದಿಗೆ ಅವನು ಮಲಗಲು ಹೋದನು.

ಮರುದಿನ ಸಂಜೆ, ಶಾಲೆಯಿಂದ ಮನೆಗೆ ಹಿಂದಿರುಗುವ ದಾರಿಯಲ್ಲಿ, ಅವರಿಬ್ಬರೂ ನಿಧಾನವಾಗಿ ನಡೆಯುತ್ತಿದ್ದರು. ದಿನದ ಕೊನೆಯ ಸಡಿಲತೆ, ಸ್ನೇಹದ ಬೆಚ್ಚಗಿನ ಮಾತುಕತೆ.

"ಅರ್ಜುನ್, ಕೆಲವೊಮ್ಮೆ ನನಗೆ ಅನ್ನಿಸುತ್ತೆ... ನಾನು ಲೋಕವನ್ನು ಬೇರೆ ರೀತಿಯಲ್ಲಿ ನೋಡುತ್ತೇನೆ ಅಂತ," ಅರ್ಜುನ ಮಂಕಾಗಿ ಹೇಳಿದನು, ಒಂದು ಎಲೆಯನ್ನು ಕೈಯಲ್ಲಿ ತಿರುಗಿಸುತ್ತಾ.

ಕಿರಣ್ ನಗುತ್ತಾ ಅವನ ಹೆಗಲಿಗೆ ತಟ್ಟಿದನು. "ಅದಕ್ಕೇ ನೀನು ಒಳ್ಳೇ ಕಲಾವಿದ. ನಿನ್ನ ಕಣ್ಣುಗಳು ಬೇರೆಯವರಿಗಿಂತ ಹೆಚ್ಚು ನೋಡುತ್ತವೆ. ಆದ್ರೆ ಅದು ನಿನ್ನನ್ನು ಅಸಹಾಯಕನಾಗಿ ಮಾಡಬಾರದು, ಅಷ್ಟೇ. ಈ ಲೋಕದಲ್ಲಿ ಬದುಕಬೇಕಾದರೆ ಕೆಲವು ವಿಷಯಗಳು ಕಲಿಯಬೇಕು."

ಅವರು ನಗುತ್ತಾ, ಹರಟೆ ಹೊಡೆಯುತ್ತಾ ಮುಂದೆ ನಡೆದರು. ಸೂರ್ಯ ಪಶ್ಚಿಮದ ಗುಡ್ಡಗಳ ಹಿಂದೆ ನಿಧಾನವಾಗಿ ಮುಳುಗುತ್ತಿದ್ದ. ಚಿನ್ನದ ಬೆಳಕು ಎಲ್ಲೆಡೆ ಚೆಲ್ಲಿತ್ತು - ನೈಜ ಸೂರ್ಯಾಸ್ತದ ಬಣ್ಣ, ಮತ್ತು ಅರ್ಜುನನಿಗೆ ಮಾತ್ರ, ಆ ಅದ್ಭುತ, ವಿವಿಧ ಬಣ್ಣಗಳ ಪ್ರಭಾವಳಿ...

ಆದರೆ ಇಂದು ಏನೋ ವಿಶೇಷ ಇತ್ತು. ವಿಭಿನ್ನ.

ಅರ್ಜುನ ಒಂದು ಕ್ಷಣ ನಿಂತನು. ದಾರಿಯ ಬದಿಯಲ್ಲಿ ಬೆಳೆದಿದ್ದ ಒಂದು  ಗಿಡದ ಸುತ್ತ ಪ್ರಭಾವಳಿ ಸಾಮಾನ್ಯಕ್ಕಿಂತ ಹೆಚ್ಚು ದಟ್ಟವಾಗಿತ್ತು, ಬಹುತೇಕ ಮಿಂಚುತ್ತಿತ್ತು, ಜೀವಂತವಾಗಿ ಚಲಿಸುತ್ತಿತ್ತು.

"ಏನಾಯ್ತು?" ಕಿರಣ್ ಹಿಂದೆ ತಿರುಗಿ ಕೇಳಿದನು.

"ಇಲ್ಲ... ಏನೂ ಇಲ್ಲ," ಅರ್ಜುನ ತಲೆ ಅಲ್ಲಾಡಿಸಿದನು, ಆದರೆ ಅವನ ಕಣ್ಣುಗಳು ಆ ಗಿಡದ ಮೇಲೇ ಉಳಿದಿದ್ದವು.

ಅವರು ಮುಂದೆ ನಡೆದರು. ದಾರಿಯ ತಿರುವಿನಲ್ಲಿ, ಅವರ ಜಾರು ಬಂಡೆಯ ಹತ್ತಿರ, ಕಿರಣ್ ಇದ್ದಕ್ಕಿದ್ದಂತೆ ನಿಂತನು.

"ಅರ್ಜುನ್..." ಅವನ ಧ್ವನಿ ದುರ್ಬಲವಾಯಿತು, ಬಹುತೇಕ ಪಿಸುಗುಟ್ಟಿದಂತೆ.

ಅರ್ಜುನ ತಿರುಗಿ ನೋಡಿದನು. ಕಿರಣ್ ತನ್ನ ಹೊಟ್ಟೆ ಎರಡೂ ಕೈಗಳಿಂದ ಹಿಡಿದುಕೊಂಡಿದ್ದನು, ಮುಖ ಬಿಳಿಚ್ಚಿಕೊಂಡಿತ್ತು ತುಟಿಗಳು ಬಿಗಿಯಾಗಿ ಒತ್ತಿದ್ದವು.

"ಕಿರಣ್? ಏನಾಯ್ತು?" ಅರ್ಜುನ ಆತಂಕದಿಂದ ಹತ್ತಿರ ಬಂದನು, ಚೀಲ ಕೆಳಗೆ ಬಿದ್ದಿತು.

"ಗೊತ್ತಿಲ್ಲ... ಇದ್ದಕ್ಕಿದ್ದಂತೆ... ತುಂಬಾ ನೋವು..." ಕಿರಣ್ ತಲೆ ಕುಗ್ಗಿಸಿದನು, ನೋವಿನಿಂದ ಕಣ್ಣುಗಳು ಸಿಕ್ಕಿದವು. ಬೆವರು ಅವನ ಹಣೆಯ ಮೇಲೆ ಹರಿಯತೊಡಗಿತು.

"ಕುತ್ಕೋ.. ಇಲ್ಲೇ..." ಅರ್ಜುನ ಹೇಳಿದನು..

ಆದರೆ ಕಿರಣ್ ನಿಂತಿರಲಾಗಲಿಲ್ಲ. ಅವನ ಕಾಲುಗಳು ನಡುಗಿದವು, ಮತ್ತು ಇದ್ದಕ್ಕಿದ್ದಂತೆ ಅವನು ಕುಸಿದನು - ಮೊದಲು ಮಂಡಿಗಳ ಮೇಲೆ, ನಂತರ ಸಂಪೂರ್ಣವಾಗಿ ನೆಲದ ಮೇಲೆ. ಅವನ ದೇಹ ನೋವಿನಿಂದ ಸೆಳೆಯತೊಡಗಿತು.

"ಕಿರಣ್! ಕಿರಣ್!" ಅರ್ಜುನ ಅವನ ಹತ್ತಿರ ಮಂಡಿ ಊರಿದನು, ಭಯದಿಂದ ಕೈಗಳು ನಡುಗಿದವು. "ಏನಾಯ್ತು? ನನಗೆ ಹೇಗೆ ಹೇಳು... ನಾನೇನು ಮಾಡಲಿ? ಯಾರಾದರೂ ಇದ್ದಾರೆಯೇ? ಸಹಾಯ!"
ಆದರೆ ದಾರಿ ಖಾಲಿಯಾಗಿತ್ತು. ಮಳೆಗಾಲದಿಂದ ಬೆಳಿಗ್ಗೆ ಹೋಗುವವರು, ಸಂಜೆ ಬರುವವರು - ಎರಡೂ ಸಮಯದಲ್ಲಿ ಜನರು ಇರುತ್ತಿದ್ದರು. ಆದರೆ ಈಗ, ಈ ಕ್ಷಣದಲ್ಲಿ, ಯಾರೂ ಇರಲಿಲ್ಲ.
ಕಿರಣ್ ಏನೋ ಹೇಳಲು ಪ್ರಯತ್ನಿಸಿದನು, ಆದರೆ ಪದಗಳು ಬರಲಿಲ್ಲ. ಅವನ ತುಟಿಗಳು ನೀಲಿಯಾಗತೊಡಗಿದವು, ಉಸಿರಾಟ ಏರುಪೇರಾಯಿತು.
ಅರ್ಜುನನ ಮನಸ್ಸು ಭಯದಿಂದ ಖಾಲಿಯಾಯಿತು. ಅವನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಆದರೆ ಆಸ್ಪತ್ರೆ ಎಷ್ಟು ದೂರ? ಅವರು ಬರುವ ಹೊತ್ತಿಗೆ... ಆಲೋಚನೆಯೇ ಅವನನ್ನು ಭಯಭೀತನನ್ನಾಗಿ ಮಾಡಿತು.
ಅವನು ಅಸಾಹಾಯಕನಾಗಿ ನಿಂತ...
ಮನಸ್ಸು ಖಾಲಿಯಾಯಿತು...
ಅವನಿಗೆ ಮಂಪರು ಕವಿಯಿತು..
ಸುತ್ತಲಿನ ಸಸ್ಯಗಳ ಸುತ್ತಲಿನ ವಿವಿಧ ಬಣ್ಣಗಳು ಪ್ರಭಾವಳಿ - ಯಾವಾಗಲೂ ಮೃದುವಾಗಿ, ನಿಧಾನವಾಗಿ ಚಲಿಸುತ್ತಿದ್ದ ಆ ಪ್ರಭೆ - ಇದ್ದಕ್ಕಿದ್ದಂತೆ ತೀವ್ರವಾಯಿತು. ಕೇವಲ ಬಣ್ಣಗಳಲ್ಲ - ಅದು ಜೀವಂತವಾಯಿತು, ವೇಗವಾಗಿ ಚಲಿಸಿತು, ಬೆಳೆಯಿತು, ಬೆಳಕು ಪ್ರಜ್ವಲಿಸಿತು.
ಮತ್ತು ಅದರೊಂದಿಗೆ... ಒಂದು ಕರೆ.
ಮಾತುಗಳಲ್ಲ. ಶಬ್ದವೂ ಅಲ್ಲ. ಆದರೆ ಏನೋ ಅವನ ಮನಸ್ಸಿನೊಳಗೆ, ಅವನ ಎದೆಯಲ್ಲಿ, ಅವನ ಅಸ್ತಿತ್ವದ ಆಳದಲ್ಲಿ - ಒಂದು ಕರೆ. ಶಬ್ದರಹಿತ ಆದರೆ ಅಸಹನೀಯವಾಗಿ ಸ್ಪಷ್ಟ. ಅನಿವಾರ್ಯ. ನಿರಾಕರಿಸಲಾಗದ್ದು...

ಅರ್ಜುನನ ಬೆನ್ನುಹುರಿಯು ಉದ್ದಕ್ಕೂ ತಣ್ಣನೆಯ ಅಲೆ ಹರಿಯಿತು. ಅವನು ನಿಧಾನವಾಗಿ, ಬಹುತೇಕ ಅನಿಚ್ಛೆಯಿಂದ, ತಲೆ ತಿರುಗಿಸಿದನು.

ದಾರಿಯ ಬದಿಯಲ್ಲಿ, ಸುಮಾರು ಹತ್ತು ಅಡಿ ದೂರದಲ್ಲಿ, ಒಂದು ಗಿಡ ಇತ್ತು,, ಆದರೆ ವಿಭಿನ್ನ ಎಲೆಗಳು. ಅದರ ಎಲೆಗಳು ಮಿಂಚುತ್ತಿದ್ದವು. ಕೇವಲ ವಿವಿಧ ಬಣ್ಣಗಳ ಪ್ರಭಾವಳಿಯಿಂದ ಅಲ್ಲ - ಅವು ಸ್ವತಃ ಬೆಳಕನ್ನು ಹೊರಸೂಸುತ್ತಿದ್ದವು, ನಿಧಾನವಾಗಿ ಮಿಡಿಯುತಿದ್ದವು, ಹೃದಯ ಮಿಡಿದಂತೆ. ಪ್ರತಿ ಮಿಡಿತದೊಂದಿಗೆ ಬೆಳಕು ತೀವ್ರವಾಗುತ್ತಿತ್ತು.

ಕರೆ ಬಲಗೊಂಡಿತು. ಅದು ಅವನ ಮನಸ್ಸಿನಲ್ಲಿ ಪ್ರತಿಧ್ವನಿಸಿತು 

ಅರ್ಜುನ ನಿಧಾನವಾಗಿ ಎದ್ದನು. ಅವನು ಮಂಪರು ಸ್ಥಿತಿಯಲ್ಲಿದ್ದನು...

ಅವನ  ಸ್ಪಂದನೆಗಳು ವಿಸ್ತರಿಸಿದವು, ಒಡಲು ನಿಶ್ಚಲವಾಯಿತು. ಉಸಿರಾಟ ನಿಧಾನವಾಯಿತು. ಅವನು ನಡೆದನು - ಅಲ್ಲ, ತೇಲಿದಂತೆ - ಆ ಗಿಡದ ಕಡೆಗೆ. ಪ್ರತಿ ಹೆಜ್ಜೆಯೂ, ನಿಶ್ಚಲ ಚಲನೆ... 

ನೆಲದ ಮೇಲೆ, ಕಿರಣ್ ಪ್ರಜ್ಞಾಹೀನನಾಗುತ್ತಿದ್ದನು. ಅವನ ಉಸಿರಾಟ ದುರ್ಬಲವಾಗುತ್ತಿತ್ತು, ಬಾಯಿಯಿಂದ ನೊರೆ ಬರುತ್ತಿತ್ತು. ಆದರೆ ಅರ್ಜುನನಿಗೆ ಏನೂ ಕೇಳಿಸಲಿಲ್ಲ, ಏನೂ ಕಾಣಲಿಲ್ಲ. ಅವನ ಲೋಕದಲ್ಲಿ ಕೇವಲ ಆ ಗಿಡ ಇತ್ತು, ಆ ಬೆಳಕು, ಆ ಕರೆ.

ಅವನು ಗಿಡದ ಮುಂದೆ ತಲುಪಿದನು. ನಿಧಾನವಾಗಿ ತನ್ನ ಬಲಗೈ ಚಾಚಿದನು. ಅವನ ಬೆರಳುಗಳು ಮೊದಲ ಎಲೆಯನ್ನು ಮುಟ್ಟಿದವು.

ಸ್ಪರ್ಶದ ಕ್ಷಣದಲ್ಲಿ, ಶಕ್ತಿಯ ತೀವ್ರ ಅಲೆ ಅವನ ಮೂಲಕ ಹಾದಿತು. ಬಿಸಿಯೂ ಅಲ್ಲ, ತಣ್ಣನೂ ಅಲ್ಲ - ಆದರೆ... ಜೀವಂತ. ಸಂಪೂರ್ಣವಾಗಿ, ತೀವ್ರವಾಗಿ ಜೀವಂತ. ಅದು ಅವನ ಬೆರಳುಗಳಿಂದ ಕೈಯೊಳಗೆ, ತೋಳಿನಲ್ಲಿ, ಎದೆಗೆ, ಸಂಪೂರ್ಣ ಶರೀರಕ್ಕೆ ಹರಡಿತು.

ಮಂಪರು ಇನ್ನಷ್ಟು ಆಳವಾಯಿತು. ಅವನ ಕೈಗಳು - ತಾವಾಗಿಯೇ ಚಲಿಸುತ್ತಿರುವಂತೆ - ಎಲೆಗಳನ್ನು ಕಿತ್ತವು. ಒಂದು, ಎರಡು, ಮೂರು, ನಾಲ್ಕು, ಐದು. ನಿಖರವಾಗಿ ಐದು ಎಲೆಗಳು. ಹೇಗೆ ಗೊತ್ತಾಯಿತೋ ತಿಳಿಯದು, ಆದರೆ ಅದು ಖಚಿತವಾಗಿತ್ತು. ನಿಖರವಾಗಿ ಐದು. ಕಡಿಮೆಯೂ ಬೇಡ, ಹೆಚ್ಚೂ ಬೇಡ.

ಅವನು ನೆಲದ ಮೇಲೆ ಮಂಡಿ ಊರಿದನು, ಚಲನೆಗಳು ನಯವಾಗಿದ್ದವು, ಬಹುತೇಕ ನಿಶ್ಚಲತೆಯಂತೆ ತನ್ನ ಎರಡೂ ಅಂಗೈಗಳ ನಡುವೆ ಆ ಐದು ಎಲೆಗಳನ್ನು ಇಟ್ಟು ಕಿವುಚಿದನು...

ಹಸಿರು ರಸ ಅವನ ಬೆರಳುಗಳ ನಡುವೆ ಸೋರಿತು. ಸಾಮಾನ್ಯ ಸಸ್ಯ ರಸದಂತೆ ತೋರುತ್ತಿತ್ತು - ದಟ್ಟ, ಪರಿಮಳಯುಕ್ತ. ಆದರೆ ಅದರಲ್ಲಿ... ಆ ಚಿನ್ನದ ಬೆಳಕಿನ ಸೂಕ್ಷ್ಮ ಪ್ರಭೆಗಳು, ಮಿಂಚುತ್ತಾ, ಮಿನುಗುತ್ತಾ, ಜೀವಂತವಾಗಿ.

ಅವನು ಕಿರಣ್‌ನ ಕಡೆಗೆ ತಿರುಗಿದನು. ತನ್ನ ಸ್ನೇಹಿತನ ಮುಖ ಈಗ ಬಹುತೇಕ ಬೂದು ಬಣ್ಣವಾಗಿತ್ತು, ತುಟಿಗಳು ನೀಲಿ. ಮರಣದ ನೆರಳು ಅವನ ಮುಖದ ಮೇಲೆ ನಿಧಾನವಾಗಿ ಹರಿದಾಡುತ್ತಿತ್ತು.
ಮಂಪರಿನಲ್ಲಿಯೇ, ಅರ್ಜುನ ಕಿರಣ್‌ನ ತಲೆಯನ್ನು ಎತ್ತಿ, ಮೆಲ್ಲಗೆ ಹಿಂದಕ್ಕೆ ಬಾಗಿಸಿದನು. ಒಂದು ಕೈಯಿಂದ ತಲೆ ಹಿಡಿದು, ಇನ್ನೊಂದು ಕೈಯಿಂದ ಅವನ ಬಾಯಿಯನ್ನು ಸ್ವಲ್ಪ ತೆರೆದನು..
ಮತ್ತು ನಂತರ, ಅವನ ಹಸಿರು-ಬಣ್ಣದ ಅಂಗೈಗಳಿಂದ, ಆ ವಿವಿಧ ಬಣ್ಣಗಳ ಪ್ರಭೆಯಿಂದ ತುಂಬಿದ ರಸವನ್ನು ಕಿರಣ್‌ನ ಬಾಯಿಗೆ ಹನಿಹನಿಯಾಗಿ ಬೀಳಿಸಿದನು.

ಒಂದು ಹನಿ. ಎರಡು. ಮೂರು.

ಹನಿಗಳು ಕಿರಣ್‌ನ ತುಟಿಗಳನ್ನು ಸ್ಪರ್ಶಿಸಿದವು, ನಿಧಾನವಾಗಿ ಒಳಕ್ಕೆ ಜಾರಿದವು. ಪ್ರತಿ ಹನಿಯೂ ಪ್ರಭೆಯಿಂದ ಬೆಳಕಿನ ಚುಕ್ಕಿಗಳಿಂದ ತುಂಬಿತ್ತು, ಬಹುತೇಕ ಜೀವಂತವಾಗಿ ಚಲಿಸುತ್ತಿತ್ತು.

ನಾಲ್ಕು. ಐದು. ಆರು.

ಅರ್ಜುನನ ಕಣ್ಣುಗಳು ತೆಲಿಸಿದ್ದವು... ಇನ್ನು ಮಂಪರಿನಲ್ಲಿದ್ದ...

ಮತ್ತು ನಂತರ, ಒಂಬತ್ತನೇ ಹನಿಯ ನಂತರ, ಅವನು ನಿಂತನು. ಅದು ಸಾಕು. ಹೇಗೆ ಗೊತ್ತಾಯಿತೋ ತಿಳಿಯದು, ಆದರೆ ಅದು ಸಾಕು...